
ಬೆಂಗಳೂರು,ಏ. ೨-ಆಟ ವಾಡುತ್ತಿದ್ದ ಮಗು ನೀರಿನಲ್ಲಿ ಬಕೆಟ್ ನಲ್ಲಿ ಮುಳುಗಿ ಮಗು ಮೃತಪಟ್ಟಿದ್ದು, ಮಗುವಿನ ಸಾವಿಗೆ ನಾನೇ ಕಾರಣ ಎಂಬ ಅಪರಾಧ ಪ್ರಜ್ಞೆಯಿಂದ ಮನನೊಂದ ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಚಂದ್ರಾಲೇಔಟ್ ನ ಭೈರವೇಶ್ವರನಗರದಲ್ಲಿ ನಡೆದಿದೆ.
ಮೃತರನ್ನು ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾವಾಲಿ (೨೯) ಮತ್ತು ಅವರ ೧೧ ತಿಂಗಳ ಗಂಡು ಮಗು ಅಗಸ್ತ್ಯ ಎಂದು ಗುರುತಿಸಲಾಗಿದೆ. ಪ್ರತಿಭಾ ಅವರು ಸಿಲ್ಕ್ ಬೋರ್ಡ ಬಳಿ ಇರುವ ಇನ್ ಟೈಮ್ ಟೆಕ್ ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು (ವರ್ಕ್ ಫ್ರಮ್ ಹೊಂ) ಮನೆಯಿಂದಲೇ ಕೆಲಸ ಮಾಡುತ್ತಿದ್ದರು.
ಮನೆಯ ಮಹಡಿಯ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ನಿನ್ನೆ ಸಂಜೆ ತರಲು ಪ್ರತಿಭಾ ಅವರು ಮೇಲಕ್ಕೆ ಹೋಗಿದ್ದಾಗ ದುರಂತ ಸಂಭವಿಸಿದೆ. ತಾಯಿ ಟೆರೇಸ್ ಮೇಲೆ ಹೋಗಿದ್ದ ಸಮಯದಲ್ಲಿ ಮಗು ಆಟವಾಡುತ್ತಾ ಬಚ್ಚಲು ಮನೆಗೆ ಹೋಗಿದೆ. ಅಲ್ಲಿ ನೀರು ತುಂಬಿದ್ದ ಬಕೆಟ್‌ನಲ್ಲಿ ಮುಳುಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಬಟ್ಟೆ ತಂದು ಕೆಳಗೆ ಬಂದ ಪ್ರತಿಭಾಗೆ ಮಗುವಿನ ಸ್ಥಿತಿ ಕಂಡು ದಿಕ್ಕು ತೋಚದಂತಾಗಿದೆ. ಮಗು ಬಾರದ ಲೋಕಕ್ಕೆ ಪಯಣಿಸಿರುವುದು ಖಚಿತವಾದಾಗ, ಪ್ರತಿಭಾ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ.
ಪೀಣ್ಯ ೨ ನೇ ಹಂತದ ಏಸ್ ಡಿಸೈನರ್ ನಲ್ಲಿ ಇಂಜಿನಿಯರ್ ಆಗಿದ್ದ ಪತಿ ಮಹಾಂತೇಶ್ (೩೨) ಸಂಜೆ ೬.೩೦ ರ ವೇಳೆ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ತಮ್ಮ ಬಳಿಯಿದ್ದ ಮತ್ತೊಂದು ಕೀಯಿಂದ ಬಾಗಿಲು ತೆರೆದು ಒಳಹೋದಾಗ ಪ್ರತಿಭಾ ಜೋಕಾಲಿಯ ಹುಕ್ ಸೀರೆಯನ್ನು ಕಟ್ಟಿ ಕುತ್ತಿಗೆಗೆ ಬಿಗಿದುಕೊಂಡು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗು ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿತ್ತು.
ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್‌ನಿಂದ ಪತಿಗೆ ಸಾವಿನ ರಹಸ್ಯ ಗೊತ್ತಾಗಿದೆ. ‘ನನ್ನ ಮಗುವಿನ ಸಾವಿಗೆ ನಾನೇ ಕಾರಣ, ಅವನನ್ನು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪ್ರತಿಭಾ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದರು.
ನೇಣಿಗೆ ಶರಣಾಗುವ ಮುನ್ನ ಪ್ರತಿಭಾ ಅವರು ೧೫ ಡೋಲೋ ಮಾತ್ರೆಗಳನ್ನು ನುಂಗಿ, ಕೈ ಕುಯ್ದುಕೊಂಡು ಸಾಯುವುದಕ್ಕೆ ಯತ್ನಿಸಿದ್ದರು. ಆದರೆ ರಕ್ತ ಬಾರದ ಕಾರಣ ಕೊನೆಗೆ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ.
ಚಂದ್ರಾಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಯತೀಶ್ ತಿಳಿಸಿದ್ದಾರೆ.

























