
ಬೆಂಗಳೂರು,ಅ.೨೧- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ರಾಜ್ಯದ ಸಂಪತ್ತನ್ನು ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಚುನಾವಣೆಗಳಿಗೆ ಕಳುಹಿಸಿದ್ದೀರಿ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ವಿರುದ್ದ ಇಂದಿಲ್ಲಿ ನೇರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ೨೦೦೮-೨೦೧೩ ನತ್ತು ೨೦೧೯-೨೦೨೩ ಅವಧಿಯಲ್ಲಿ ಬಿಜೆಪಿ ಸರ್ಕಾರ ಇದ್ದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪ, ಡಿ.ವಿ ಸದಾನಂದಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರು ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಹಣ ಕಳುಹಿಸಿಲ್ಲವೇ ತಾವು ಮಾಡಿದ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕುವ ಪ್ರಯತ್ನ ಸರಿಯಲ್ಲ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಕರ್ನಾಟಕ ಬಿಜೆಪಿಯ ಸುಳ್ಳಿನ ಕಾರ್ಖಾನೆ ಮತ್ತೆ ಓವರ್‍ಟೈಮ್ ಕೆಲಸ ಮಾಡುತ್ತಿದೆ. ಬಿಹಾರ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ಹಣ ನೀಡುತ್ತಿದೆ ಎಂಬ ನಿಮ್ಮ ಕಪೋಲಕಲ್ಪಿತ ಆರೋಪ ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ಸುಳ್ಳಿನ ಸರಮಾಲೆಗೆ ಕೊನೆಯೇ ಇಲ್ಲವೇ.ಚುನಾವಣೆಗೆ ಅಕ್ರಮ ಭ್ರಷ್ಟಾಚಾರದ ಹಣವನ್ನು ಬಳಸುವುದು ನಿಮ್ಮ ಜಾಯಮಾನ, ಕಾಂಗ್ರೆಸ್‌ನದ್ದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ದೇಶಕ್ಕೆ ನೀಡಿದ ಕೊಡುಗೆ ಮತ್ತು ಜನಪರ ಕೆಲಸಗಳಿಂದ ಕಾಂಗ್ರೆಸ್ ಪಕ್ಷ ಇಂದಿಗೂ ಸದೃಢವಾಗಿದೆ. ನಿಮ್ಮದೇ ಆಡಳಿತದ ಕರಾಳ ಇತಿಹಾಸ ನೋಡಿ ಎಂದು ಹೇಳಿದ್ದಾರೆ.
೨೦೦೮-೨೦೧೩ ಮತ್ತು ೨೦೧೯-೨೦೨೩ ಅವಧಿಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿತ್ತು. ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಕಾಲದಲ್ಲಿ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಚುನಾವಣೆಗೆ ಕರ್ನಾಟಕದ ಸಂಪತ್ತನ್ನು ಚುನಾವಣೆಗಳಿಗೆ ಹಂಚಿದಿದ್ದೀರಾ ಈ ಬಗ್ಗೆ ರಾಜ್ಯದ ಜನತೆಯ ಮುಂದೆ ಉತ್ತರಿಸುವ ಧೈರ್ಯ ನಿಮಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಹಣದ ಹೊಳೆ ಹರಿಸಿ, ಶಾಸಕರನ್ನು ಕುದುರೆಗಳಂತೆ ಖರೀದಿಸಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದ ‘ಆಪರೇಷನ್ ಕಮಲ’ದ ಪಿತಾಮಹರು ನೀವು ಎನ್ನುವುದು ರಾಜ್ಯದ ಮೂಲೆ ಮೂಲೆಯಲ್ಲಿರುವ ಸಾಮಾನ್ಯ ಪ್ರಜೆಗೂ ತಿಳಿದಿದೆ. ಭ್ರಷ್ಟಾಚಾರದ ಗಂಗೋತ್ರಿಯಾದ ನೀವು, ಶುದ್ಧ ಹಸ್ತರೆಂದು ಬಿಂಬಿಸಿಕೊಳ್ಳಲು ಹೊರಟಿರುವುದು ಶತಮಾನದ ಅತಿದೊಡ್ಡ ಜೋಕ್ ಎಂದಿದ್ದಾರೆ.
ಅಧಿಕಾರಕ್ಕಾಗಿ ನೀವು ಖರೀದಿಸಿದ ಕ್ರಿಮಿನಲ್ ಹಿನ್ನೆಲೆಯ ಶಾಸಕರನ್ನು ಕರ್ನಾಟಕ ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘ ಶೇಕಡಾ ‘೪೦ ರಷ್ಟು ಕಮಿಷನ್’ ಆರೋಪ ಮಾಡಿ ಪ್ರಧಾನಿ ನರೇಂದ್ರೆ ಮೋದಿ ಪತ್ರ ಬರೆದು ನಿಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಜಗಜ್ಜಾಹೀರು ಮಾಡಿತ್ತು. ಆ ಕಮಿಷನ್ ಹಣ ಯಾವ ಯಾವ ರಾಜ್ಯಗಳಿಗೆ ಹೋಯಿತು ಎಂದು ಜನತೆಗೆ ಈಗಲಾದರೂ ಲೆಕ್ಕ ಕೊಡುವಿರ ಎಂದಿದ್ದಾರೆ.
ರಾಜ್ಯ ಸರ್ಕಾರ ಜಾರಿ ಮಾಡಿರುವ ‘ಗ್ಯಾರಂಟಿ’ಗಳ ಮೂಲಕ ರಾಜ್ಯದ ಬಡವರ ಖಾತೆಗೆ ನೇರವಾಗಿ ಹಣ ಜಮೆ ಮಾಡುತ್ತಿದೆ. ನಿಮ್ಮಂತೆ ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಕಪ್ಪು ಹಣವನ್ನು ಬಿಳಿ ಮಾಡುವ ಚಾಳಿ ನಮಗಿಲ್ಲ ಎಂಬುದಾಗಿ ಗುಡುಗಿದ್ದಾರೆ.
































