
ಚಿತ್ತಾಪುರ, ಮಾ. 8- ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶಾಂಗ ನೀತಿಯಿಂದಾಗಿ ನಮ್ಮ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳುಮಾಡುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಚಿತ್ತಾಪುರ ಪಟ್ಟಣದಲ್ಲಿ ರೂ 1069 ಕೋಟಿ ವೆಚ್ಚದ ಕಾಮಗಾರಿಗಳು ಅಡಿಗಲ್ಲು ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
” ಟ್ರಂಪ್ ಒಬ್ಬ ಡಿಕ್ಟೇಟರ್, ಮೋದಿ ಅವರ ಗುಲಾಮ ಎಂದು ಕಟು ಟೀಕಿಸಿದ ಖರ್ಗೆ, ರಷ್ಯಾದಿಂದ ಈಗ ಒಂದು ತಿಂಗಳ ಮಾತ್ರ ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದೆ. ಅಮೇರಿಕದವರು ಹೇಳಿದಂತೆ ಮೋದಿ ಕೇಳುತ್ತಿದ್ದಾರೆ. ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ನಮ್ಮ ದೇಶವನ್ನು ಗಿರಿವಿ ಇಟ್ಟಿದ್ದಾರೆ” ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಪ್ರಾಚ್ಯ ನಲ್ಲಿ ನಡೆಯುತ್ತಿರುವ ಯುದ್ದದ ಬಗ್ಗೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ, ಜವಾಹರ್ ಲಾಲ್ ನೆಹರು ಪ್ರಧಾನಿಯಾಗಿದ್ದಾಗ ನಾನ್ ಅಲೈನ್ ಮೆಂಟ್ ಒಪ್ಪಂದ ಮಾಡಿಕೊಂಡಿದ್ದರಿಂದ ಅದು ವಿಶ್ವಶಾಂತಿಗೆ ಕಾರಣವಾಗಿತ್ತು. ಆದರೆ, ಮೋದಿ ಈಗ ಮಾಡುತ್ತಿರುವುದೇನು? ಮೋದಿ ಇಸ್ರೇಲ್ ಗೆ ಹೋಗಿ ಬಂದ ನಂತರ ಅದು ಇರಾನ್ ಮೇಲೆ ಬಾಂಬ್ ಹಾಕಿತು. ದೇಶದ ಮಖ್ಯಸ್ಥ ಖೋಮೇನಿ ಯನ್ನು ಅಮೆರಿಕ ದವರು ಹತ್ಯೆ ಮಾಡಿದರು. ಒಂದು ದೇಶದ ಮುಖ್ಯಸ್ಥನನ್ನು ಹತ್ಯೆ ಮಾಡಿದರೆ ಆ ದೇಶ ಶಾಂತಿಯಿಂದ ಇರುತ್ತದಯೇ? ಇದು ವಿಶ್ವ ಶಾಂತಿಯಿಂದ ಇರಲು ಸಾಧ್ಯವಾಗುತ್ತದೆಯಾ? ಎಂದು ಖರ್ಗೆ ಪ್ರಶ್ನಿಸಿದರು.
“ಭಾರತ ದೇಶದ 65% ರೈತರು ಕೃಷಿ ಅವಲಂಬಿತರಾಗಿದ್ದರೆ ಅಮೇರಿಕಾದ ದಲ್ಲಿ 3% ಅವಲಂವಿತರಾಗಿದ್ದಾರೆ. ನಮ್ಮ ದೇಶದ ಉತ್ಪನ್ನಗಳಿಗೆ ಅಮೇರಿಕಾದಲ್ಲಿ ಟ್ಯಾಕ್ಸ್ ಇಲ್ಲ. ಆದರೆ, ಅಮೇರಿಕಾದ ಉತ್ಪನ್ನಗಳ ಮೇಲೆ ಮನಬಂದಂತೆ ಟ್ಯಾಕ್ಸ್ ಹಾಕಲಾಗುತ್ತಿದೆ. ಟ್ರಂಪ್ ನನ್ನ ಸ್ನೇಹಿತ ಎನ್ನುತ್ತಾರೆ. ಆದರೆ, ರಷ್ಯಾದಿಂದ ತೈಲ ಖರೀದಿ ಮಾಡದರೆ ನಿಮ್ಮ ಮೇಲೆ ಟ್ಯಾಕ್ಸ್ ಹಾಕುತ್ತೇನೆ ಟ್ರಂಪ್ ಹೇಳುತ್ತಾರೆ. ಟ್ರಂಪ್ ಜೊತೆ ದಿನಾಲೂ ಮಾತನಾಡುತ್ತಿರುವುದಾಗಿ ಮೋದಿ ಹೇಳುತ್ತಾರೆ. ಟ್ಯಾಕ್ಸ್ ಹಾಕುವ ಬಗ್ಗೆನೆ ಮಾತನಾಡುತ್ತಾರ? ಎಫ್ಟಿನ್ ಫೈಲ್ ನಲ್ಲಿ ಯಾರು ಯಾರು ಎಲ್ಲಿ ಹೋಗಿದ್ದರು ಎನ್ನುವ ಮಾಹಿತಿ ಇದೆ ಎನ್ನಲಾಗುತ್ತಿದೆ. ಅದನ್ನು ಇಟ್ಟುಕೊಂಡೆ ಟ್ರಂಪ್ ಮೋದಿಗೆ ಹೆದರಿಸುತ್ತಿದ್ದಾರೆ” ಎಂದರು.
ಕಾಂಗ್ರೆಸ್ ಅಧಿಕಾರದ 75 ವರ್ಷ ಆದರೂ ಕೂಡಾ ನಮ್ಮ ದೇಶದ ತಂಟೆಗೆ ಯಾರೂ ಬಂದಿರಲಿಲ್ಲ. ಪಾಕಿಸ್ತಾನವನ್ನು ಒಡೆದು ಎರಡು ಭಾಗ ಮಾಡಿದರು. ಅವರಿಗೆ ಇದ್ದಂತ ಧೈರ್ಯ ನಿಮಗೇಕಿಲ್ಲ? ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರ ಮೇಲೆ ಹರಿಹಾಯ್ದರು.
“ಬಿಜೆಪಿಯರವರಿಗಂತೂ ಕೆಲಸನೇ ಇಲ್ಲ. ಸೋನಿಯಾ ಗೆ, ರಾಹುಲ್ ಗೆ, ನನಗೆ, ಪ್ರಿಯಾಂಕ್ ಗೆ , ಸಿದ್ದರಾಮಯ್ಯ ಗೆ ಹಾಗೂ ಶಿವಕುಮಾರ್ ಗೆ ಬೈಯ್ಯುವುದೇ ಕೆಲಸವಾಗಿದೆ. ನಮ್ಮ ಸರ್ಕಾರ ಇದ್ದಾಗ ಮಾಡಿರುವ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಗದಗ ವಾಡಿ ರೈಲ್ವೆ ಲೈನ್, ರಸ್ತೆಗಳು, ಹೈವೈ ಗಳು ಮಾಡುದ್ದು ನಾವೇ ಹೊರತು ನೀವಲ್ಲ” ಬಿಜೆಪಿ ವಿರುದ್ದ ಟೀಕಿಸಿದರು.
” ಆರ್ಟಿಕಲ್ 371 ಜೆ ಜಾರಿಗೆ ತಂದಿದ್ದು ನಾವು. ನಮ್ಮ ಬೇಡಿಕೆಗೆ ಅಂದಿನ ಗೃಹ ಸಚಿವ ಅಡ್ವಾಣಿ ಸ್ಪಂದಿಸಲಿಲ್ಲ ಎಂದು ಅಂದಿನ ಬಿಜೆಪಿಯ ಪ್ರತಿರೋಧವನ್ನು ನೆನಪಿಸಿಕೊಂಡ ಖರ್ಗೆ, ನಾನು ಅಂದಿನ ಸಂದರ್ಭದಲ್ಲಿ ನಮ್ಮ ಪರವಾಗಿರಲು 130 ಜನ ಎಂ.ಪಿಗಳಿಗೆ ಹೇಗೆ ಮನವೊಲಿಸಿದ್ದೇನೆ ಅದು ನನಗೆ ಮಾತ್ರ ಗೊತ್ತು. ಆರ್ಟಿಕಲ್ 371 J ನನಗೆ, ನನ್ನ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ಅನುಕೂಲವಾಗಲ್ಲ. ಅದು ಅನುಕೂಲವಾಗುವುದು ಜನಸಾಮಾನ್ಯರಿಗೆ. ಇಂದು ಮೆಟಿಕಲ್, ಇಂಜಿನಿಯರಿಂಗ್ ಸೀಟು ಪಡೆದುಕೊಳ್ಳಲು ಅನುಕೂಲವಾಗಿದೆ” ಎಂದರು.
ಕಲಬುರಗಿ ಗೆ ವಿಮಾನ ನಿಲ್ದಾಣ ಮಾಡಲು ಶ್ರೀನಿವಾಸ ಸರಡಗಿ ಗ್ರಾಮದ ಜನರು 1,000 ಎಕರೆ ಜಮೀನು ಕೊಟ್ಟಿದ್ದಾರೆ. ಅವರಿಗೆ ಇಲ್ಲಿಂದಲೆ ನಾನು ನಮಸ್ಕಾರ ಮಾಡುತ್ತೇನೆ. ವಿಮಾನ ನಿಲ್ದಾಣವನ್ನು ಖರ್ಗೆ ಜಾಸ್ತಿ ಓಡಾಡುತ್ತಾರೆ ಎಂದು ಬಂದ್ ಮಾಡಲಾಗಿದೆ. ನಾನು ದಿನಾಲು ಬರುತ್ತೇನಾ ?” ಎಂದು ಪ್ರಶ್ನಿಸಿದರು.
” ನಮ್ಮ ದೇಶದ ಯುವಕರ ಭವಿಷ್ಯ ಉಜ್ವಲವಾಗಬೇಕಾದರೆ ಯೋಜನೆಗಳು ಬರಬೇಕು ಹೇಳಿದ ಖರ್ಗೆ, ಯುವಕರಲ್ಲಿ ಜಗಳ ಹಚ್ಚುವುದು ಹಾಗೂ ದ್ವೇಷ ಹರಡುವುದೇ ಇವರ ಕೆಲಸವಾಗಿದೆ. ಶ್ರೀಮಂತರು ಹೇಗೋ ಬಚಾವಾಗುತ್ತಾರೆ ಬಡವರು ಎಲ್ಲಿ ಹೋಗಬೇಕು. ? ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಕೆಲವರು ಬ್ರಿಟಿಷ್ ರ ಕೆಳಗೆ ಕೆಲಸ ಮಾಡುತ್ತಿದ್ದವರು. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹನಿ ರಕ್ತ ಹರಿಸಿಲ್ಲ. ನಾನು ಯಾರಿಗೂ ಬೈಯುತ್ತಿಲ್ಲ. ನಮ್ಮನ್ನು ಟೀಕಿಸುವವರು ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು. ಅವರ ಬಗ್ಗೆ ನೀವು ಎಚ್ಚರದಿಂದ ಇರಬೇಕು ಅವರ ಮಾತಿಗೆ ಮರುಳಾಗಬಾರದು” ಎಂದರು.
ಚಿತ್ತಾಪುರದ ಒಬ್ಬ ಶಾಸಕ ಇಡೀ ದೇಶದ ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ಮಾತನಾಡುತ್ತಿರುವುದು ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಕೊಂಡಾಡಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀವು ಸದಾ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಗೆ ಇನ್ನು ಇಪ್ಪತ್ತು ಸೀಟ್ ಬಂದಿದ್ದರೆ ಮೋದಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಮ್ಮ ನಿರೀಕ್ಷೆಯಂತೆ ಸೀಟು ಬರಲಿಲ್ಲ ಅದು ನಮ್ಮ ದುರ್ದೈವ. ನಮ್ಮ ಸೋಲನ್ನು ಬಿಜೆಪಿಯವರು ಟೀಕಿಸುತ್ತಾರೆ. ಆದರೆ, ನಾವು ಜನರ ಪ್ರೀತಿ ವಿಶ್ವಾಸದಿಂದ ಮುಂದುವರೆಯುತ್ತೇವೆ ಎಂದರು.





























