
ಬೆಂಗಳೂರು,ಮಾ.೩೧-ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಅಪ್ರಾಪ್ತ ಬಾಲಕರಿಂದ ಮೊಬೈಲ್ ಕಳ್ಳತನ ನಡೆಸಿದ ಜಾಲವನ್ನು ೨೪ ಗಂಟೆಯೊಳಗೆ ಬೇಧಿಸಿರುವ ಕೇಂದ್ರ ವಿಭಾಗದ ಪೊಲೀಸರು ೧೮ ಲಕ್ಷ ೨೧ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ಜಾಲದ ಓರ್ವ ಪ್ರಮುಖ ಆರೋಪಿ ಹಾಗೂ ಹಲವು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಎಲ್ಲಾ ಆಯಾಮಗಳಲ್ಲಿ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ಮಾ. ೨೮ ರಂದು ನಡೆದ ಐಪಿಎಲ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ವೀಕ್ಷಕರ ೩೦ ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ನಡೆಸಿರುವ ದೂರುಗಳು ದಾಖಲಾಗಿದ್ದವು.
ಈ ಸಂಬಂಧ ಪ್ರಕರಣಗಳನ್ನು ದಾಖಲಿಸಿ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಆಧರಿಸಿ ಕೆಲವೇ ಗಂಟೆಗಳಲ್ಲಿ ಪ್ರಮುಖ ಆರೋಪಿ ಮತ್ತು ಹಲವು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ಹೇಳಿದರು.
ಆರೋಪಿಯು ಜಾಲ ರಚಿಸಿಕೊಂಡು ಹೊರರಾಜ್ಯದಿಂದ ಬಾಲಕರನ್ನು ಕರೆದುಕೊಂಡು ಬಂದ ಹೊಟೇಲ್ ನಲ್ಲಿರಿಸಿಕೊಂಡು ಪಂದ್ಯಾವಳಿಯ ಮೊದಲೇ ಖರೀದಿಸಿದ್ದ ಟಿಕೆಟ್ ನಿಂದ ಒಳಗೆ ಕಳುಹಿಸಿ ವೀಕ್ಷಕರ ಗಮನ ಬೆರೆಡೆ ಸೆಳೆದು ಕಳ್ಳತನ ಮಾಡಿಸಲಾಗಿತ್ತು ಎಂದು ಹೇಳಿದರು.
ಜಾಲದಿಂದ ಬೇರೆ ರಾಜ್ಯದ ನಗರಗಳಲ್ಲಿ ಮೊಬೈಲ್ ಕಳ್ಳತನ ಮಾಡಿರುವ ಶಂಕೆಯಿದ್ದು,ಅಲ್ಲಿನ ಪೊಲೀಸರ ಜೊತೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗುವುದು ಎಂದರು.
ಬಂಧಿತ ಜಾಲದಿಂದ ವಿವಿಧ ಕಂಪನಿಯ ೨೧ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ಆತನ ಹಲವು ಸಹಚರರುಗಳನ್ನು ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ತನಿಖೆಗೆ ಒಳಪಡಿಸಿ ತನಿಖೆ ಮುಂದುವರೆಸಲಾಗಿದೆ ಎಂದರು.
ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್.ಎಂ.ಹಾಕೆ ಮಾರ್ಗದರ್ಶನದಲ್ಲಿ, ಕಬ್ಬನ್‌ಪಾರ್ಕ್ ಉಪವಿಭಾಗದ ಎಸಿಪಿ ಡಾ.ಪ್ರಿಯದರ್ಶಿನಿ ನೇತೃತ್ವದಲ್ಲಿ, ಕಬ್ಬನ್‌ಪಾರ್ಕ್ ಪೊಲೀಸ್ ಇನ್ಸ್ ಸ್ಪೆಕ್ಟರ್ ದೇವೇಂದ್ರಪ್ಪ.ಕೆ.ಎಸ್ ಮತ್ತವರ ಅಧಿಕಾರಿ ಸಿಬ್ಬಂದಿಗಳ ತಂಡವು ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.






























