
ಬೆಂಗಳೂರು, ಫೆ. ೨೩- ರಾಜ್ಯದ ಶಾಲೆಗಳಲ್ಲಿ ಮೊಬೈಲ್ ಫೋನ್ ನಿಷೇಧ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಶಾಲೆಗಳಲ್ಲಿ ಮಕ್ಕಳಿಗೆ ಮೊಬೈಲ್ ಫೋನ್‌ಗಳನ್ನು ಕೊಟ್ಟರೆ ಅವರ ಗಮನ ಬೇರೆಡೆ ಹೋಗಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂಬ ವರದಿಗಳು ಇವೆ. ಹಾಗಾಗಿ ಶಾಲೆಗಳಲ್ಲಿ ಮೊಬೈಲ್ ಫೋನ್ ಬ್ಯಾನ್ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ೧೬ ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧ ಮಾಡುವ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಸದ್ಯದಲ್ಲೇ ಶಾಲೆಗಳಲ್ಲಿ ಮೊಬೈಲ್ ನಿಷೇಧಗೊಳಿಸುವ ಬಗ್ಗೆ ಒಂದು ತೀರ್ಮಾನ ಮಾಡುತ್ತೇವೆ ಎಂದರು.
ಆಸ್ಟ್ರೇಲಿಯಾ, ಯುರೋಪ್‌ನ ಹಲವು ದೇಶಗಳಲ್ಲಿ ಈಗಾಗಲೇ ಶಾಲೆಗಳಲ್ಲಿ ಮೊಬೈಲ್ ನಿಷೇಧ ಮಾಡಲಾಗಿದೆ. ಅದೇ ರೀತಿ ರಾಜ್ಯದಲ್ಲೂ ಮೊಬೈಲ್ ನಿಷೇಧ ಜಾರಿ ಮಾಡುವ ಚರ್ಚೆಗಳು ನಡೆದಿವೆ. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಚರ್ಚಿಸಿ ಸಚಿವ ಸಂಪುಟದಲ್ಲಿ ಈ ಬಗ್ಗೆ ಒಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ಶಾಲಾ ಮಕ್ಕಳು ಮೊಬೈಲ್ ಬಳಸುವುದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆಯೂ ಅಧ್ಯಯನ ಮಾಡಿ ಅಂತಿಮವಾಗಿ ಮೊಬೈಲ್ ನಿಷೇಧದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಕಟ್ಟೆಚ್ಚರ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಗ್ರರು ಸ್ಫೋಟಕ್ಕೆ ಸಂಚು ನಡೆಸಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.
ದೆಹಲಿ ಪೊಲೀಸರು ವಿಧ್ವಂಸಕ ಕೃತ್ಯಗಳಿಗೆ ಸಂಚು ನಡೆಸಿದ್ದ ೮ ಜನರನ್ನು ಬಂಧಿಸಿರುವವರಲ್ಲಿ ಬಾಂಗ್ಲಾ ದೇಶಿಯರು ಇದ್ದಾರೆ ಎಂಬ ವರದಿಗಳಿದ್ದು, ನಾವು ಸಹ ಬಾಂಗ್ಲಾ ವಲಸಿಗರ ಬಗ್ಗೆ ಎಚ್ಚರ ವಹಿಸಿದ್ದೇವೆ. ಕಳೆದ ೧ ತಿಂಗಳಿನಿಂದಲೇ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರ ಪತ್ತೆಗೆ ವಿಶೇಷ ಆಂದೋಲನವನ್ನೆ ಕೈಗೊಂಡಿದ್ದೇವೆ. ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠರಿಗೆ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಜತೆಗೆ ಬೆಂಗಳೂರಿನಲ್ಲಿ ಪೊಲೀಸ್ ಠಾಣೆ ಮಟ್ಟದಲ್ಲಿ ಅಕ್ರಮ ವಲಸಿಗರು, ಅನುಮಾನಾಸ್ಪದ ಚಟುವಟಿಕೆಗಳನ್ನು ನಡೆಸುವ ವ್ಯಕ್ತಿಗಳ ಮೇಲೆ ನಿಗಾ ಇರಿಸಲಾಗಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಗೃಹ ಇಲಾಖೆ ಕೈಗೊಂಡಿದೆ ಎಂದು ಅವರು ಹೇಳಿದರು.
ಸಾಮಾಜಿಕ ನ್ಯಾಯದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವೆ ನಡೆದಿರುವ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ನ್ಯಾಯವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಅಡಿಪಾಯವಾಗಿದೆ. ಮೊದಲಿನಿಂದಲೂ ಅವರು ಅದನ್ನೇ ಮಾಡುತ್ತಾ ಬಂದಿದ್ದಾರೆ ಎಂದು ಹೇಳುವ ಮೂಲಕ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿಲುವನ್ನು ಸಮರ್ಥಿಸಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಇಡೀ ರಾಜಕೀಯ ಜೀವನದುದ್ದಕ್ಕೂ ಸಾಮಾಜಿಕ ನ್ಯಾಯದ ಸಿದ್ದಾಂತದ ಅಡಿಯೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅದರಲ್ಲಿ ಹೊಸದೇನು ಇಲ್ಲ. ಸ್ವಾಭಿವಿಕವಾಗಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಬದ್ಧತೆಯನ್ನು ಮತ್ತೊಮ್ಮೆ ಹೇಳಿದ್ದಾರೆ ಅಷ್ಟೇ ಎಂದರು.
ಜೆಡಿಎಸ್‌ನಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಏನೆಲ್ಲಾ ನಡೆದಿದೆ ಎಂಬ ಬಗ್ಗೆ ನಮಗೆ ಗೊತ್ತಿಲ್ಲ. ಸಿದ್ದರಾಮಯ್ಯನವರು ಮೊದಲು ಜೆಡಿಎಸ್‌ನಲ್ಲೇ ಇದ್ದರು. ನಂತರ ಅವರನ್ನು ಪಕ್ಷದಿಂದ ಹೊರಗೆ ಹಾಕಿದರು. ಹಾಗಾಗಿ ಜೆಡಿಎಸ್‌ನಲ್ಲಿ ಈ ಹಿಂದಿನ ಆಂತರಿಕ ವಿಚಾರಗಳ ಬಗ್ಗೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ನಡುವೆ ನಡೆದಿರುವ ವಾಕ್ಸಮರಕ್ಕೆ ನಾನು ಉತ್ತರ ಕೊಡಲು ಆಗಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ದಲಿತ ಸಿಎಂ ವಿಚಾರ ಮತ್ತೆ ಮುನ್ನಲೆಗೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದನ್ನೆಲ್ಲಾ ವಿರೋಧ ಪಕ್ಷಗಳು ಮಾಡುತ್ತಿವೆ. ಬಿಜೆಪಿ-ಜೆಡಿಎಸ್ ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಈ ರೀತಿ ದಲಿತ ಸಿಎಂ ಕೂಗು ತಂದಿದ್ದಾರೆ ಎಂದು ದೂರಿದರು.
ದಲಿತರನ್ನು ಮುಖ್ಯಮಂತ್ರಿ ಮಾಡುವುದು ಕಾಂಗ್ರೆಸ್ ಪಕ್ಷವೇ, ಇನ್ಯಾರು ಮಾಡುತ್ತಾರೆ. ಯಾವಾಗ ಯಾರನ್ನು ಸಿಎಂ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಅವರು ಹೇಳಿದರು.
ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿರುವ ಬಿಜೆಪಿ ಶಾಸಕ ಚಂದ್ರು ಲಮಾಣಿ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ಲೋಕಾಯುಕ್ತ ಎಲ್ಲವನ್ನು ನೋಡಿಯೇ ಕಾರ್ಯಾಚರಣೆ ನಡೆಸಿದ್ದಾರೆ. ಷಡ್ಯಂತ್ರವೇನೂ ಇಲ್ಲ ಎಂದರು.
ಭ್ರಷ್ಟಾಚಾರದ ಬಗ್ಗೆ ಪಾಠ ಮಾಡುವ ಬಿಜೆಪಿ ನಾಯಕರು ತಮ್ಮ ಶಾಸಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಬಗ್ಗೆ ಏನೂ ಮಾತನಾಡದೆ ಮೌನವಾಗಿದ್ದಾರೆ ಎಂದು ಅವರು ಟೀಕಿಸಿದರು.
ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಸುವ ಬಗ್ಗೆ ಸಚಿವ ಸಂಪುಟ ತೀರ್ಮಾನ ಕೈಗೊಳ್ಳುತ್ತದೆ ಎಂದ ಅವರು ಈ ಹಿಂದೆ ಕೆ.ಎಚ್. ರಂಗನಾಥ್ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ವಿದ್ಯಾರ್ಥಿ ಚುನಾವಣೆಗಳಲ್ಲಿ ಘರ್ಷಣೆಗಳು ನಡೆದಿದ್ದವು. ಆ ಕಾರಣಕ್ಕೆ ವಿದ್ಯಾರ್ಥಿ ಚುನಾವಣೆಗಳನ್ನು ನಿಷೇಧಿಸಲಾಗಿತ್ತು ಎಂದರು.



























