
ಕೋಲಾರ .೨೪- ವೇಮಗಲ್ ನಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕದ ಕಾರ್ಯ ಕ್ರಮ ಉದ್ಘಾಟನೆ ವಿಚಾರದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ರಿಗೆ ಸೇರಿದಂತೆ ಎಲ್ಲರಿಗೂ ಇಮೇಲ್ ಮೂಲಕ ಆಹ್ವಾನ ನೀಡಲಾಗಿದೆ. ನನಗೂ ಸಹ ಇಮೇಲ್ ನಲ್ಲಿ ಮಾಹಿತಿ ಬಂದಿದ್ದು, ಯಾವುದೇ ಆಹ್ವಾನ ಪತ್ರಿಕೆಯ ಮಾಹಿತಿ ಬಂದಿಲ್ಲ ಎಂದು ಸಂಸದ ಎಂ ಮಲ್ಲೇಶ್ ಬಾಬು ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಗೆ ಹೊಸ ಕೈಗಾರಿಕೆಗಳು ಬರುವುದರಿಂದ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ, ಜಮೀನು ನೀಡಿದ ರೈತರಿಗೆ ಉದ್ಯೋಗ ಸೃಷ್ಟಿ ಹಾಗೂ ಯುವಕರಿಗೆ ನಿರುದ್ಯೋಗ ಸಮಸ್ಯೆ ನೀಗಲು ಕೈಗಾರಿಕೆಗಳಿಂದ ಸಾಧ್ಯವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ನರಸಾಪುರ ಕೈಗಾರಿಕಾ ವಲಯದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅವರೇ ಬಹಳಷ್ಟು ಕಾರ್ಯಕ್ರಮಗಳಿಗೆ ಗುದ್ದಲಿ ಪೂಜೆಯನ್ನು ಮಾಡಿದ್ದಾರೆ.
ಆದರೆ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕದ ವಿಚಾರದಲ್ಲಿ ಅವರು ಮಾಹಿತಿ ಇಲ್ಲ ಎಂದು ಹೇಳಿದ್ದು, ಅವರನ್ನೇ ಕೇಳಬೇಕು ಎಂದರು.
ಕೈಗಾರಿಕೆಗಳಲ್ಲಿ ಯುವಕರಿಗೆ ಅರ್ಹತೆ ಮೇಲೆ ಉದ್ಯೋಗಗಳನ್ನು ನೀಡಲಾಗುತ್ತಿದೆ ಜೊತೆಗೆ ಮತ್ತಷ್ಟು ಅಭಿವೃದ್ಧಿಗೆ ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಮುಂದೆ ಬಂದಿದ್ದು ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ಜಿಲ್ಲೆ ಹಿತ ದೃಷ್ಟಿಯಿಂದ ಸ್ಪಂದಿಸಲಾಗುವುದು ಎಂದರು.
ಮಾಜಿ ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ವೇಮಗಲ್ ನಲ್ಲಿ ನಡೆದ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕದ ಕಾರ್ಯಕ್ರಮ ಜಿಲ್ಲೆಯ ಕಾರ್ಯಕ್ರಮ ಹಾಗೂ ರಕ್ಷಣಾ ಇಲಾಖೆಯ ಕಾರ್ಯಕ್ರಮವಾಗಿದ್ದು, ಆದರೂ ಸಹ ಕೋಲಾರ ಶಾಸಕರಿಗೆ ಇ-ಮೇಲ್ ಮತ್ತು ದೂರವಾಣಿ ಕರೆ ಮಾಡಿದ್ದರೂ, ಸಹ ಮಾಹಿತಿ ಇಲ್ಲ ಎಂದಿದ್ದಾರೆ.
ಆದರೆ ರಾಜ್ಯ ಸರ್ಕಾರದ ಸಚಿವ ಎಂ.ಬಿ.ಪಟೀಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆದರೆ ಕೋಲಾರ ಶಾಸಕರು ಏಕೆ ಭಾಗವಹಿಸಿಲ್ಲ ಎಂದು ಪ್ರಶ್ನಿಸಿದರು.
ಜಿಲ್ಲೆ ಅಭಿವೃದ್ಧಿಗೆ ಕೈಗಾರಿಕೆಗಳು ಬಂದಿದ್ದು, ಶಾಸಕರು ಖುಷಿ ಪಡಬೇಕು, ಕೈಗಾರಿಕಾ ವ್ಯಾಪ್ತಿಯ ವಿದ್ಯುತ್ ಕಂಬಗಳಿಗೆ ಟ್ರ್ಯಾಕ್ಟರ್ಗಳಲ್ಲಿ ಡಿಕ್ಕಿ ಹೊಡೆಯಿರಿ ಎಂದು
ರೈತರನ್ನು ಪ್ರಚೋದನೆ ಮಾಡಿದ್ದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಈ ವಿಚಾರದಲ್ಲಿ ದೇಶದ ವಿರೋಧಿಗಳನ್ನು ಮೆಚ್ಚಿಸುವಂತೆ, ಮಾಡಿದ್ದಿರಾ ಎಂದು ಕಿಡಿಕಾರಿದರು.





























