
ಕೋಲಾರ,ಜ,೧೩-ನಗರದ ಕ್ರೀಡಾ ಮೂಲಸೌಕರ್ಯಕ್ಕೆ ಹೊಸ ಮೆರುಗು ನೀಡುವ ನಿಟ್ಟಿನಲ್ಲಿ, ಒಳಾಂಗಣ ಕ್ರೀಡಾಂಗಣದ ಹಿಂಭಾಗದಲ್ಲಿ ನಿರ್ಮಾಣವಾಗಲಿರುವ ಅತ್ಯಾಧುನಿಕ ಈಜುಕೊಳ ಕಾಮಗಾರಿಗೆ ಮಾನ್ಯ ಶಾಸಕರಾದ ಡಾ. ಕೊತ್ತೂರು ಜಿ. ಮಂಜುನಾಥ ಇಂದು ಅಡಿಗಲ್ಲು ಸಮರ್ಪಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಈ ಮಹತ್ವದ ಯೋಜನೆಗೆ ಚಾಲನೆ ನೀಡಲಾಯಿತು.
ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಈ ಕಾಮಗಾರಿಗಾಗಿ ಒಟ್ಟು ರೂ. ೫,೫೫,೫೧,೫೧೮ (ಐದು ಕೋಟಿ ಐವತ್ತೈದು ಲಕ್ಷದ ಐವತ್ತೊಂದು ಸಾವಿರದ ಐದು ನೂರ ಹದಿನೆಂಟು ರೂಪಾಯಿ) ಅನುದಾನವನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ಈಜುಕೊಳದೊಂದಿಗೆ ಸುಸಜ್ಜಿತ ಚೇಂಜ್ ರೂಮ್‌ಗಳು, ಆಧುನಿಕ ಎಲೆಕ್ಟ್ರೋ-ಮೆಕ್ಯಾನಿಕಲ್ ಫಿಲ್ಟರೇಶನ್ ವ್ಯವಸ್ಥೆ ಹಾಗೂ ಅಗತ್ಯ ವಿದ್ಯುದೀಕರಣ ಕಾಮಗಾರಿಗಳು ಒಳಗೊಂಡಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕೋಲಾರದ ಕ್ರೀಡಾಪಟುಗಳ ದಶಕಗಳ ಬೇಡಿಕೆ ಇಂದು ಈಡೇರುತ್ತಿದೆ. ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡು ಮುಂದಿನ ೧೧ ತಿಂಗಳ ಅವಧಿಯೊಳಗೆ ಈಜುಕೊಳವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ,” ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್‌ಕುಮಾರ್ ಮಾತನಾಡಿ, ಕ್ರೀಡಾ ಇಲಾಖೆಯ ಈ ಯೋಜನೆಯು ಜಿಲ್ಲೆಯ ಯುವಜನತೆಗೆ ಮತ್ತು ಈಜು ಕಲಿಯುವ ಆಸಕ್ತರಿಗೆ ವರದಾನವಾಗಲಿದೆ ಎಂದರು.
ಬೆಂಗಳೂರಿನ ಮೆ|| ಸನ್ ಶೈನ್ ಪೂಲ್ಸ್ ಸಂಸ್ಥೆಗೆ ಈ ಕಾಮಗಾರಿಯ ಹೊಣೆ ನೀಡಲಾಗಿದ್ದು, ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳ ಉಸ್ತುವಾರಿಯಲ್ಲಿ ಕೆಲಸ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಎಂ.ಎಲ್. ಅನಿಲ್‌ಕುಮಾರ್, ಇಂಚರ ಗೋವಿಂದ ರಾಜು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಕುಮಾರ್, ಕೂಡ ಅಧ್ಯಕ್ಷ ಹನೀಪ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್ ಕುಮಾರ್, ಸ್ಥಳೀಯ ಮುಖಂಡರು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ, ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.





























