
ಗದಗ,ಫೆ.೨೨-ಸರ್ಕಾರಿ ಕಾಮಗಾರಿಯೊಂದರ ಸಂಬಂಧ ೫ ಲಕ್ಷ ಪಡೆದ ಪ್ರಕರಣದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದು ಬಂಧಿತ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರ ಆಪ್ತ ಸಹಾಯಕರಾದ ಮಂಜು ವಾಲ್ಮೀಕಿ ಮತ್ತು ಗುರು ಲಮಾಣಿಯನ್ನು ತಡರಾತ್ರಿ ೨ ಗಂಟೆಗೆ ಗದಗ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ಈ ಸಮಯದಲ್ಲಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಕ್ಸಮರ ತಳ್ಳಾಟ ನಡೆದಿದ್ದು, ಕೆಲ ಸಮಯ ಸ್ಥಳದಲ್ಲಿ ಹೈಡ್ರಾಮಾವೇ ಸೃಷ್ಟಿಯಾಯಿತು.
ಆರೋಗ್ಯ ತಪಾಸಣೆ ನಂತರ ಮೂವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ದು ಹಾಜರುಪಡಿಸಲಾಗಿದೆ.
ಒಂದೇ ಪ್ರಕರಣ ಆಗಿದ್ದರಿಂದ ಆಪ್ತ ಸಹಾಯಕರನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದರು.
ಭಾನುವಾರ ಕೋರ್ಟ್ ರಜೆ ಇರುವ ಕಾರಣ ನ್ಯಾಯಾಧೀಶರ ಗೃಹ ಕಚೇರಿಯಲ್ಲಿ ಚಂದ್ರು ಲಮಾಣಿ ಮತ್ತು ಇತರರನ್ನು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕೇಳಲಿದ್ದಾರೆ.
ಲೋಕಾಯುಕ್ತರಿಂದ ಬಂಧಿತ ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಗುತ್ತಿಗೆದಾರನ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಸೊಂಟ ಮುರಿಸ್ತೀನಿ.. ಪ್ರೀತಿ ವಿಶ್ವಾಸಕ್ಕೆ ಹೇಳಿದರೆ ಹೀಗೆಲ್ಲ ನಾಟಕ ಮಾಡ್ತೀಯಾ? ನಮ್ಮ ತಾಲೂಕಿನಲ್ಲಿ ಮಾಡಿದರೆ ಸೊಂಟ ಮುರಿಸ್ತೀನಿ ಎಂದು ಗುತ್ತಿಗೆದಾರನ ವಿರುದ್ಧ ಲಮಾಣಿ ಬೆದರಿಕೆ ಹಾಕಿದ್ದಾರೆ. ಈ ವೇಳೆ, ಇದೊಂದು ಸಾರಿ ತಪ್ಪಾಗಿದೆ ಎಂದು ಗುತ್ತಿಗೆದಾರ ಆಡಿಯೋದಲ್ಲಿ ಮಾತನಾಡಿದ್ದಾರೆ.
ಗುತ್ತಿಗೆದಾರ ವಿಜಯ ಪೂಜಾರ್ ಎಂಬಾತನಿಂದ ೫ ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಲಮಾಣಿ ಆಪ್ತ ಸಹಾಯಕ ಪ್ರಕರಣ ಬೆನ್ನಲ್ಲೇ ಜಿಲ್ಲೆಯ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಬಿರುಸಿನ ವಾಗ್ವಾದ ಭುಗಿಲೆದ್ದಿದೆ.
ಚಂದ್ರು ಲಮಾಣಿಯನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ಓರ್ವ ಸ್ವಾಮೀಜಿಯ ಆಡಿಯೋ ಬಹಿರಂಗವಾದ ಕೂಡಲೇ ಚಂದ್ರು ಲಮಾಣಿ ಮತ್ತು ಗುತ್ತಿಗೆದಾರ ವಿಜಯ್ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಡಿಯೋದಲ್ಲಿ ಕಾಮಗಾರಿ ಗುತ್ತಿಗಾಗಿ ಕಮಿಷನ್ ಪಡೆಯುವ ವಿಷಯಗಳೂ ಚರ್ಚೆಯಾಗಿವೆ.
ರಸ್ತೆ ಕಾಮಗಾರಿಗೆ ಸಂಬಂಧ ಗುತ್ತಿಗೆದಾರ ವಿಜಯ ಪೂಜಾರ ಎಂಬುವರಿಂದ ೫ ಲಕ್ಷ ರೂ ಲಂಚ ಸ್ವೀಕರಿಸುವ ವೇಳೆ ನಿನ್ನೆ ಶಾಸಕರನ್ನು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು.
೧೧ ಲಕ್ಷ ರೂಗಳ ಲಂಚದ ಡೀಲ್ ನಡೆದಿದ್ದು, ಅದರ ಭಾಗವಾಗಿ ೫ ಲಕ್ಷ ರೂ. ಹಣ ಪಡೆಯುವ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಜಿಲ್ಲೆಯ ಸಂಕದಾಳ ಗ್ರಾಮದ ರಸ್ತೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸುಮಾರು ೧ ಕೋಟಿ ರೂ ವೆಚ್ಚ ಅಂದಾಜಿಸಲಾಗಿದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ೧% ಕಮಿಷನ್ (ಲಂಚ) ಬೇಡಿಕೆ ಇಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.






























