
ಮತ್ತೆ ಯುದ್ಧದ ಭೀತಿ
ಇಸ್ಲಮಾಬಾದ್,ಏ.೧೨- ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ- ಇರಾನ್ ನಡುವೆ ನಡೆದ “ಇಸ್ಲಾಮಾದ್ ಮಾತುಕತೆ” ಮೂರು ಸುತ್ತಿನ ಮಾತುಕತೆಯ ನಂತರವೂ ಅಂತಿಮ ಒಪ್ಪಂದಕ್ಕೆ ಬರಲು ಸಾದ್ಯವಾಗದೆ ವಿಫಲವಾಗಿದ್ದು ಉಭಯ ದೇಶಗಳ ನಡುವೆ ಮತ್ತೆ ಯುದ್ಧ ಭೀತಿ ಎದುರಾಗಿದೆ. ೨೧ ಗಂಟೆಗಳ ಚರ್ಚೆ ನಡೆಯಿತಾದರೂ ಒಪ್ಪಂದಕ್ಕೆ ಬರಲು ವಿಫಲವಾಗಿವೆ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಿಳಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಉನ್ನತ ಮಟ್ಟದ ಮಾತುಕತೆಗಳು ೨೧ ಗಂಟೆಗಳ ಮ್ಯಾರಥಾನ್ ಚರ್ಚೆಗಳ ನಂತರ ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿವೆ. ಹಲವು ದಶಕಗಳ ನಂತರ ನಡೆದ ಈ ಮಹತ್ವದ ಸಂವಾದದಲ್ಲಿ ಎರಡೂ ರಾಷ್ಟ್ರಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಸಮನ್ವಯಗೊಳಿಸಲು ವಿಫಲವಾದವು.
ಮಾತುಕತೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಎರಡೂ ಪಾಳಯಗಳು ಸೂಚಿಸಿದರೂ, ಅಣು ಕಾರ್ಯಕ್ರಮ, ಆರ್ಥಿಕ ನಿರ್ಬಂಧಗಳು ಹಾಗೂ ಪ್ರಾದೇಶಿಕ ನಿಯಂತ್ರಣ ಕುರಿತ ಪ್ರಮುಖ ವಿಷಯಗಳಲ್ಲಿ ಗಂಭೀರ ಭಿನ್ನಾಭಿಪ್ರಾಯಗಳು ಮುಂದುವರಿದಿವೆ.
ಸಂಧಾನ ವಿಫಲಕ್ಕೆ ಪ್ರಮುಖ ಕಾರಣಗಳು
ಅಣು ಕಾರ್ಯಕ್ರಮದ ಕುರಿತ ಗಂಭೀರ ಭಿನ್ನಾಭಿಪ್ರಾಯದಿಂದ ಅಮೆರಿಕ- ಇರಾನ್ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸದಂತೆ ಖಚಿತ ಭರವಸೆ ನೀಡಬೇಕೆಂದು ಒತ್ತಾಯಿಸಿತು. ಯುರೇನಿಯಂ ಶುದ್ಧೀಕರಣ ಸೇರಿದಂತೆ ಕಟ್ಟುನಿಟ್ಟಿನ ನಿಯಂತ್ರಣಗಳನ್ನು ವಿಧಿಸಲು ಮುಂದಾಯಿತು. ಆದರೆ ಇರಾನ್ ತನ್ನ ಸ್ವಾಯತ್ತ ಹಕ್ಕುಗಳ ಮೇಲೆ ಅತಿಯಾದ ಹಸ್ತಕ್ಷೇಪ ಎಂದು ಇದನ್ನು ವಿರೋಧಿಸಿತು.
ಆರ್ಥಿಕ ನಿರ್ಬಂಧಗಳು ಮತ್ತು ಸ್ಥಗಿತಗೊಂಡ ಆಸ್ತಿ ಬಿಡುಗಡೆ ವಿವಾದ,ಇರಾನ್ ತನ್ನ ವಿದೇಶಗಳಲ್ಲಿ ಸ್ಥಗಿತಗೊಂಡಿರುವ ಆಸ್ತಿಗಳನ್ನು ಬಿಡುಗಡೆ ಮಾಡಬೇಕೆಂದು ಬೇಡಿಕೆ ಇಟ್ಟಿತು. ಕತಾರ್ ಸೇರಿದಂತೆ ವಿವಿಧ ದೇಶಗಳಲ್ಲಿ ಇರುವ ನಿಧಿಗಳನ್ನು ಬಿಡುಗಡೆ ಮಾಡುವ ವಿಷಯದಲ್ಲಿ ಅಮೆರಿಕ ಯಾವುದೇ ಒಪ್ಪಿಗೆ ನೀಡಿಲ್ಲವೆಂದು ಸ್ಪಷ್ಟಪಡಿಸಿದೆ.
ಹೋರ್ಮುಜ್ ಕಣಿವೆಯ ನಿಯಂತ್ರಣ ವಿವಾದ,ಜಗತ್ತಿನ ಇಂಧನ ಸಾಗಣೆಯ ಸುಮಾರು ಶೇ. ೨೦ ಸಾಗುವ ಹೋರ್ಮುಜ್ ಕಣಿವೆಯ ನಿಯಂತ್ರಣ ಪ್ರಮುಖ ಸಂಘರ್ಷದ ವಿಷಯವಾಯಿತು. ಇರಾನ್ ಹೆಚ್ಚಿನ ಅಧಿಕಾರ ಹಾಗೂ ಸಾಗಣೆ ಶುಲ್ಕ ಸಂಗ್ರಹಣೆಯ ಹಕ್ಕು ಕೇಳಿದರೆ, ಅಮೆರಿಕ ಮುಕ್ತ ಸಾಗಣೆ ಖಾತ್ರಿಪಡಿಸುವುದರ ಮೇಲೆ ಒತ್ತಾಯಿಸಿತು.
ಪ್ರಾದೇಶಿಕ ಬೇಡಿಕೆಗಳು ಮತ್ತು ಯುದ್ಧ ಪರಿಹಾರ, ಇರಾನ್ ಮಾತುಕತೆಯ ವ್ಯಾಪ್ತಿಯನ್ನು ವಿಸ್ತರಿಸಿ ಯುದ್ಧ ಪರಿಹಾರ ಹಾಗೂ ಲೆಬನಾನ್ ಸೇರಿದಂತೆ ಪ್ರದೇಶಗಳಲ್ಲಿ ಸಂಪೂರ್ಣ ಯುದ್ಧ ವಿರಾಮಕ್ಕೆ ಒತ್ತಾಯಿಸಿತು. ಆದರೆ ಅಮೆರಿಕ ತನ್ನ ಗಮನವನ್ನು ಅಣು ನಿಯಂತ್ರಣ ಮತ್ತು ಸಮುದ್ರ ಭದ್ರತೆ ಕಡೆಗೆ ಮಾತ್ರ ಸೀಮಿತಗೊಳಿಸಿತು.
ಮಾತುಕತೆ ವೇಳೆ ಉಭಯ ರಾಷ್ಟ್ರಗಳ ನಡುವೆ ನಂಬಿಕೆಯ ಕೊರತೆ ಸ್ಪಷ್ಟವಾಗಿ ಗೋಚರಿಸಿತು. ಅಧಿಕಾರಿಗಳ ನಡುವೆ ಭಾವನಾತ್ಮಕ ಏರಿಳಿತಗಳು, ಆರೋಪ-ಪ್ರತ್ಯಾರೋಪಗಳು ಚರ್ಚೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿತು.
ಮುಂದಿನ ಬೆಳವಣಿಗೆ
ಒಪ್ಪಂದ ಸಾಧ್ಯವಾಗದಿದ್ದರೂ, “ಕೆಲವು ಭಿನ್ನಾಭಿಪ್ರಾಯಗಳಿದ್ದರೂ ಮಾತುಕತೆ ಮುಂದುವರಿಯುತ್ತದೆ” ಎಂದು ಇರಾನ್ ತಿಳಿಸಿದೆ. ಆದಾಗ್ಯೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಉದ್ವಿಗ್ನತೆ ಕಡಿಮೆಯಾಗುತ್ತದೆಯೋ ಅಥವಾ ಹೆಚ್ಚಾಗುತ್ತದೆಯೋ ಎಂಬುದು ಮುಂದಿನ ಚರ್ಚೆಗಳ ಮೇಲೆ ಅವಲಂಬಿತವಾಗಿದೆ.
ಅಮೆರಿಕಕ್ಕೆ ವ್ಯಾನ್ಸ್ ವಾಪಸ್
ಶಾಶ್ವತ ಕದನ ವಿರಾಮ ಘೋಷಿಸುವ ಹಂಬಲದೊಂದಿಗೆ ಪಾಕಿಸ್ತಾನದ ಇಸ್ಲಮಾಬಾದ್ಗೆ ಆಗಮಿಸಿದ್ದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಯಾವುದೇ ಫಲಪ್ರದವಿಲ್ಲದೆ ಅಮೆರಿಕಕ್ಕೆ ವಾಪಸ್ಸಾಗಿದ್ದಾರೆ.
೨೧ ಗಂಟೆಗಳ ಕಾಲ ನಡೆದ ಮಾತುಕತೆಗಳು ಯಾವುದೇ ಫಲ ನೀಡದ ನಂತರ, ಅಮೆರಿಕದ ನಿಯೋಗದ ನೇತೃತ್ವ ವಹಿಸಿದ್ದ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ವಾಪಸಾತಿ ಘೋಷಿಸಿದ್ದು ಎಲ್ಲಾ ರೀತಿಯ ಅವಕಾಶ ನೀಡಿದ್ದರೂ ಇರಾನ್ ಅದನ್ನು ಬಳಸಿಕೊಳ್ಳಲು ವಿಫಲವಾಗಿದೆ ಎಂದು ಜೆಡಿ ವ್ಯಾನ್ಸ್ ಹೇಳಿದೆ.
ಮತ್ತೊಂದೆಡೆ ಇರಾನ್ ಸಂಸತ್ತಿನ ಸ್ಪೀಕರ್ ನೇತೃತ್ವದ ನಿಯೋಗ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಮಾತುಕತೆ ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗದೆ ಇರಾನ್ಗೆ ತೆರಳಿದ್ದಾರೆ.
ಅಮೆರಿಕದ ಬೇಡಿಕೆ ಸ್ವೀಕಾರವಲ್ಲ: ಇರಾನ್
ಮಾತುಕತೆ ಸಮಯದಲ್ಲಿ ಅಮೆರಿಕ ಮುಂದಿಟ್ಟ ಹಲವು ಬೇಡಿಕೆಗಳು ನ್ಯಾಯಸಮ್ಮತ ಮತ್ತು ಸ್ವೀಕಾರವಲ್ಲದ ಹಿನ್ನೆಲೆಯಲ್ಲಿ ಅವುಗಳನ್ನು ಇರಾನ್ ಒಪ್ಪಿಕೊಂಡಿಲ್ಲ ಎಂದಿ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್, ಹೇಳಿದ್ದಾರೆ.
“ಹೋರ್ಮುಜ್ ಜಲಸಂಧಿ, ಶಾಂತಿಯುತ ಪರಮಾಣು ಶಕ್ತಿ ಮತ್ತು ಇತರ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಅಮೆರಿಕದ ಮಹತ್ವಾಕಾಂಕ್ಷೆಯ ಷರತ್ತುಗಳನ್ನು ಇರಾನ್ ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದರೆ ನಾವೂ ಕೂಡ ಪ್ರತಿಯಾಗಿ ದಾಳಿ ಮಾಡುವ ಎಲ್ಲಾ ಸಾಮರ್ಥ್ಯ ಹೊಂದಿದ್ದೇವೆ ಎಂದು ಇರಾನ್ ನ ಉನ್ನತ ಮೂಲಗಳು ಎಚ್ಚರಿಕೆ ನೀಡಿವೆ.























