
ತೇಜಸ್ವಿ ರಾಮಮೂರ್ತಿ ಸೇರಿ ಹಲವರ ಬಂಧನ
ಬೆಂಗಳೂರು,ಫೆ.೯- ನಮ್ಮ ಮೆಟ್ರೋ ಪ್ರಯಾಣದರ ಏರಿಕೆ ವಿರುದ್ಧ ನಗರದ ಆರ್ವಿ ರೋಡ್ ಮೆಟ್ರೋ ನಿಲ್ದಾಣದಲ್ಲಿ ಖಾಲಿ ಟ್ರಂಕ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕ ರಾಮಮೂರ್ತಿ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ನಮ್ಮ ಮೆಟ್ರೋ ಪ್ರಯಾಣದರ ಏರಿಕೆ ವಿರುದ್ಧ ಹಲವಾರು ಬಿಜೆಪಿ ಮುಖಂಡರು ಕಾರ್ಯಕರ್ತರ ಜೊತೆ ಆರ್ವಿ ರೋಡ್ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಖಾಲಿ ಟ್ರಂಕ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಸಂಸದ ತೇಜಸ್ವಿ ಸೂರ್ಯ, ಶಾಸಕ ರಾಮಮೂರ್ತಿ ಸೇರಿ ಹಲವರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.
ಪ್ರತಿಭಟನೆ ವೇಳೆ ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ’ ಎಂದು ಬರೆದಿರುವ ಟ್ರಂಕ್ನಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಭಾವಚಿತ್ರಗಳಿದ್ದವು.
ಪೊಲೀಸರ ವಶಕ್ಕೆ ಪಡೆಯುವ ಮುನ್ನ ಸುದ್ಧಿಗಾರರ ಜೊತೆ ಮಾತನಾಡಿದ ತೇಜಸ್ವಿ ಸೂರ್ಯ,ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ಗೂಂಡಾಗಳಿಗೇ ಹೆದರದೆ ಹೋರಾಟ ಮಾಡಿ ಬಂದಿದ್ದೇನೆ. ನಮ್ಮದೇ ಕ್ಷೇತ್ರದಲ್ಲಿ ನೋಟಿಸ್ ಕೊಟ್ಟು ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನೆ ನಡೆಸದಂತೆ ಪೊಲೀಸರು ನೀಡಿರುವ ನೋಟಿಸ್ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ ಸೂರ್ಯ, ನಮ್ಮದೇ ಪ್ರದೇಶದಲ್ಲಿ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದರು.
ನಾವು ಮೆರವಣಿಗೆ, ಧರಣಿ ಅಥವಾ ಮುಷ್ಕರ ನಡೆಸುತ್ತಿಲ್ಲ, ಬದಲಾಗಿ ಸಾಮಾನ್ಯ ನಾಗರಿಕನಾಗಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ಈ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದ ಸೂರ್ಯ, ಬೆಂಗಳೂರು ಮೆಟ್ರೋಗೆ ಸರ್ಕಾರ ಬಜೆಟ್ ಬೆಂಬಲ ನೀಡಬೇಕು ಮತ್ತು ಹೊಸ ದರ ನಿಗದಿ ಸಮಿತಿ ರಚಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು. ಬಿಎಂಆರ್ ಸಿಎಲ್ ಭಾರತದ ಅತಿ ದುಬಾರಿ ಮೆಟ್ರೋ ಆಗಬಾರದು. ಬದಲಿಗೆ ಶುದ್ಧ, ಸುರಕ್ಷಿತ ಮತ್ತು ದಕ್ಷ ಮೆಟ್ರೋ ಆಗಬೇಕು ಎಂದು ಅವರು ಒತ್ತಾಯಿಸಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಉತ್ತಮ ಮೂಲಸೌಕರ್ಯಕ್ಕೆ ಬೇಡಿಕೆ ಇಟ್ಟರೆ ಬಂಧನವಾಗುತ್ತದೆ. ಉತ್ತಮ ಬೆಂಗಳೂರಿಗಾಗಿ ಹೋರಾಟ ಮಾಡುವುದು ಅಪರಾಧವಾಗಿದ್ದರೆ, ನಾನು ಸಾವಿರ ಬಾರಿ ಬಂಧನಕ್ಕೊಳಗಾಗಲು ಸಿದ್ಧ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಮೆಟ್ರೋ ದರ ಏರಿಕೆ ಮಧ್ಯಮ ವರ್ಗದ ಜನರಿಗೆ ಭಾರವಾಗಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
























