ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್

ಶೇ.೫ರಷ್ಟು ದರ ಏರಿಕೆ ಸಾಧ್ಯತೆ
ಬೆಂಗಳೂರು. ಫೆ. ೪- ನಗರ ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್ ಎದುರಾಗುವ ಸಾಧ್ಯತೆ ಇದೆ. ಫೆಬ್ರವರಿಯಲ್ಲೇ ಮೆಟ್ರೋ ಪ್ರಯಾಣ ದರವನ್ನು ಕನಿಷ್ಠ ಶೇ.೫ರಷ್ಟು ಹೆಚ್ಚಿಸುವ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಃಒಖಅಐ) ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.


ಮೆಟ್ರೋ ದರ ನಿಗದಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಪ್ರತಿವರ್ಷವೂ ದರ ಪರಿಷ್ಕರಣೆ ಮಾಡುವ ಪ್ರಸ್ತಾವನೆ ಇರುವುದರಿಂದ, ಈ ಬಾರಿ ಕೂಡ ದರ ಏರಿಕೆ ಅನಿವಾರ್ಯವಾಗಬಹುದು ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ. ಸಮಿತಿಯ ಶಿಫಾರಸ್ಸು ಜಾರಿಯಾದರೆ ಕನಿಷ್ಠ ಶೇ.೫ರಷ್ಟು ಪ್ರಯಾಣ ದರ ಹೆಚ್ಚಾಗುವ ಸಾಧ್ಯತೆ ಇದೆ.


ಈ ಹಿಂದೆ ಮೆಟ್ರೋ ದರದಲ್ಲಿ ಭಾರೀ ಏರಿಕೆ ಮಾಡಿದಾಗ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೆಲ ಮಾರ್ಗಗಳಲ್ಲಿ ಶೇ.೭೧ರಷ್ಟು ದರ ಏರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅದರಿಂದಾಗಿ ಜನ ಸಾಮಾನ್ಯರು ಇನ್ನೂ ಚೇತರಿಸಿಕೊಳ್ಳದೇ ಇರುವ ಸ್ಥಿತಿಯಲ್ಲಿದ್ದಾರೆ. ದಿನನಿತ್ಯ ಕೆಲಸ, ವಿದ್ಯಾಭ್ಯಾಸ ಹಾಗೂ ವ್ಯಾಪಾರಕ್ಕಾಗಿ ಮೆಟ್ರೋ ಅವಲಂಬಿಸಿರುವ ಪ್ರಯಾಣಿಕರಿಗೆ ಆ ದರ ಏರಿಕೆ ದೊಡ್ಡ ಹೊಡೆತವಾಗಿತ್ತು.


ಇದೀಗ ಮತ್ತೆ ದರ ಏರಿಕೆ ಮಾಡಿದರೆ ಸಾಮಾನ್ಯ ಜನರ ಮೇಲೆ ಮತ್ತೊಂದು ಭಾರೀ ಆರ್ಥಿಕ ಒತ್ತಡ ಬೀಳಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಈಗಾಗಲೇ ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮೆಟ್ರೋ ದರ ಹೆಚ್ಚಳ ಮತ್ತಷ್ಟು ಸಂಕಷ್ಟ ಉಂಟುಮಾಡಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕಿದ್ದು, ಸರ್ಕಾರ ಹಾಗೂ ನಿಗಮದ ಸ್ಪಷ್ಟನೆಗಾಗಿ ಪ್ರಯಾಣಿಕರು ಕಾಯುತ್ತಿದ್ದಾರೆ.