
ಕಲಬುರಗಿ,ಫೆ.23-ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯವರೆಗೆ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಶೇ.6:6:5 ಅನುಪಾತದ ಅನುಸಾರವಾಗಿ ಸಂಪೂರ್ಣವಾಗಿ ಜಾರಿಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರು ಧ್ವನಿ ಎತ್ತಬೇಕು, ಎಲ್ಲಿ ಮೀಸಲಾತಿ ಇದೆಯೋ, ಅಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕು, ಶಿಕ್ಷಣದಲ್ಲಿ ಕೆಜಿಯಿಂದ ಪಿ.ಹೆಚ್ಡಿವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಯ ಮಕ್ಕಳಿಗೆ 6:6:5ರ ಅನುಪಾತದಲ್ಲಿ ಒಳ ಮೀಸಲಾತಿ ಸೌಲಭ್ಯ ನೀಡಬೇಕು, ಒಳ ಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾಕಾರರು ಆಗ್ರಹಿಸಿದರು.
ಒಕ್ಕೂಟದ ಮುಖಂಡರಾದ ಜಿ.ಆರ್.ವಿಜಯಕುಮಾರ, ಶ್ಯಾಮ್ ನಾಟಿಕಾರ, ಪರಮೇಶ್ವರ ಖಾನಾಪೂರ, ಲಿಂಗರಾಜ ತಾರಫೈಲ್, ರಾಜು ವಾಡೇಕರ್, ದಶರಥ ಎಂ.ಕಲಗುರ್ತಿ, ಗೋಪಾಲರಾವ ಕಟ್ಟಿಮನಿ, ಗೋಪಿಕೃಷ್ಣ ಗುಡೇನವರ್, ರಾಜು ಮುಕ್ಕಣ್ಣ, ಹಣಮಂತಪ್ಪ ತುಮಕೂರ, ಎ.ಎಚ್.ನಾಗೇಶ್, ಮಲ್ಲಿಕಾರ್ಜುನ ಜಿನಕೇರಿ, ಬಾಬುರಾವ ಸುಂಠಾಣ, ರಾಜು ಹದನೂರ, ಅಂಬಾರಾಯ ಬೆಳಕೋಟ, ರಂಜೀತ್ ಮೂಲಿಮನಿ, ಅಮಿತ್ ಸಾಗರ, ಸಚಿನ್ ಕಟ್ಟಿಮನಿ, ಮಹೇಶ ಹುಲಿಮನಿ, ಉದಯ ಚಿಟಗಾ, ಮಲ್ಲಿಕಾರ್ಜುನ ಸರಡಗಿ ಸೇರಿದಂತೆ ಮತ್ತಿತರರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
























