
ಚನ್ನಮ್ಮನ ಕಿತ್ತೂರು, ಮಾ 23: ಪ್ರತಿ ವರ್ಷದಂತೆ ಈ ಬಾರಿಯೂ ಮಹಾವೀರ ಜಯಂತಿ ಮಾರ್ಚ 31 ರಂದು ಸಡಗರ ಸಂಭ್ರಮ ವಿಜೃಂಭಣೆಯಿಂದ ಆಚರಿಸಲಾಗುವುದೆಂದು ಪ್ರಭಾರಿ ಗ್ರೇಡ್-2 ತಹಶೀಲ್ದಾರ ಪ್ರಕಾಶ ಕೋರೆ ಹೇಳಿದರು.
ಸ್ಥಳೀಯ ತಹಶೀಲ್ದಾರ ಕಛೇರಿ ಸಭಾಭವನದಲ್ಲಿ ಜರುಗಿದ ಮಹಾವೀರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷಸ್ಥಾನ ವಹಿಸಿಕೊಂಡು ಮಾತನಾಡಿದರು. ಮಹಾವೀರರ ಅಹಿಂಸಾ ತತ್ವ ಮತ್ತು ಇತಿಹಾಸ ಜಗತ್ತಿಗೆ ತಿಳಿಸುವ ಕೆಲಸ ಸರ್ಕಾರ ಜಯಂತಿ ಆಚರಿಸುತ್ತಿದೆ. ಒಂದು ದಿನ ಜರಗುವ ಈ ಜಯಂತಿಯನ್ನು ಎಲ್ಲರೂ ಕೂಡಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಜೊತೆಗೂಡಿ ಅರ್ಥಪೂರ್ಣವಾಗಿ ಅಚ್ಚುಕಟ್ಟಾಗಿ ಅದ್ದೂರಿಯಿಂದ ಆಚರಿಸೋಣ. ಈ ಜಯಂತಿ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯವಿದೆ, ಈ ಜಯಂತಿ ಮಾಡಲು ಸರ್ಕಾರ ಸಹಕಾರ ನೀಡುತ್ತಿದೆ ಎಂದರು.
ಈ ಸಭೆಯಲ್ಲಿ ಕಂದಾಯ ನಿರೀಕ್ಷಕ ಎಂ.ಎಂ.ನೀರಲಗಿ, ಮುಖಂಡರು ಉದಯ ಇಂಗಳೆ, ಬಸವರಾಜ ಶಿರಗಾಪೂರ, ಪ್ರಕಾಶ ಇಂಗಳೆ, ವಸಂತ ಪಾಟೀಲ, ಜಿನ್ನಪ್ಪ ವಣ್ಣೂರ, ಮಂಜುನಾಥ ದೊಡ್ಡಣ್ಣವರ ಸೇರಿದಂತೆ ಸಮಾಜದ ಬಾಂಧವರು, ತಾಲೂಕ ಮಟ್ಟದ ಎಲ್ಲ ಅಧಿಖಾರಿಗಳು ಇನ್ನಿತರರಿದ್ದರು.





















