
ಸಂಜೆವಾಣಿ ವಾರ್ತೆ.
ಯಾದಗಿರಿ: ಮಾ.೩:ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದಲ್ಲಿ ಧಾರ್ಮಿಕ ಮುಖಂಡರೊಬ್ಬರ ವಿರುದ್ಧ ದಾಖಲಾಗಿರುವ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಅವರು, ಯಾವುದೇ ವಿಷಯದಲ್ಲಿ ಅಂತಿಮ ಸತ್ಯಾಸತ್ಯತೆ ಹೊರಬರುವ ಮೊದಲು ಸಾರ್ವಜನಿಕ ತೀರ್ಪು ನೀಡುವುದು ನ್ಯಾಯೋಚಿತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬAಧಿಸಿದAತೆ ಸೂಕ್ತ ತನಿಖೆ ನಡೆಯಬೇಕು, ಕಾನೂನು ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು ಹಾಗೂ ಯಾರ ಮೇಲಾದರೂ ಇರುವ ಆರೋಪಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ. ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರುವ ವ್ಯಕ್ತಿಗಳ ವಿರುದ್ಧ ಆರೋಪಗಳು ಕೇಳಿಬಂದಾಗ, ಅವುಗಳ ಬಗ್ಗೆ ಸೂಕ್ಷ್ಮತೆಯಿಂದ ಹಾಗೂ ಸಂವೇದನಾಶೀಲತೆಯಿAದ ನಡೆದುಕೊಳ್ಳುವುದು ಅತ್ಯಾವಶ್ಯಕ ಎಂದು ಅವರು ಒತ್ತಿಹೇಳಿದರು.
ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವದ ಮೇರೆಗೆ, ಸಂಬAಧಪಟ್ಟ ಅಧಿಕಾರಿಗಳು ವಸ್ತುನಿಷ್ಠವಾಗಿ ತನಿಖೆ ಕೈಗೊಳ್ಳಬೇಕು. ಸತ್ಯ ಹೊರಬರುವ ತನಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಾನುಭೂತಿಯ ವಾತಾವರಣ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಯಾವುದೇ ರೀತಿಯ ತಪ್ಪು ಮಾಹಿತಿಗಳು ಹರಡದಂತೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ನ್ಯಾಯಾಂಗ ಪ್ರಕ್ರಿಯೆಗೆ ಗೌರವ ನೀಡಿ, ತನಿಖಾ ಸಂಸ್ಥೆಗಳಿಗೆ ಸಹಕರಿಸಬೇಕು ಎಂದು ಶಾಸಕ ತುನ್ನೂರ ಮನವಿ ಮಾಡಿದ್ದಾರೆ.





























