
ಬೀದರ್:ಮಾ.೯: ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯ ಸಹಕಾರಿಯಾಗಿದೆ ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸ್ವಾಮಿ ಸ್ವಾತ್ಮಾನಂದಗಿರಿ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನನ್ನ ನೆಚ್ಚಿನ ಪುಸ್ತಕ ಕಾರ್ಯಕ್ರಮದ ಅಡಿಯಲ್ಲಿ ಚಿದಂಬರ ಶಿಕ್ಷಣ ಸಂಸ್ಥೆ ಸಂಚಾಲಿತ ನಗರದ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕುವೆಂಪು ಅವರ ಕಾನೂರು ಹೆಗ್ಗಡಿತಿ ಕಾದಂಬರಿ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಜ್ಞಾನದ ಜತೆಗೆ ಮನಸ್ಸಿಗೆ ಮುದವನ್ನೂ ನೀಡುತ್ತದೆ. ವಿದ್ಯಾರ್ಥಿಗಳು ಸಾಹಿತ್ಯ ಅಧ್ಯಯನವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸಂಚಾಲಕ ಸದಸ್ಯ ಬಿ.ಎಸ್. ನೀರಗುಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲು ನನ್ನ ನೆಚ್ಚಿನ ಪುಸ್ತಕ ಕಾರ್ಯಕ್ರಮ ಹಮ್ಮಿಕೊಂಡಿರುವ ಪ್ರಾಧಿಕಾರದ ಕಾರ್ಯ ಶ್ಲಾಘನೀಯ ಎಂದರು.
ಪುಸ್ತಕಗಳು ಜಾಗತಿಕ ಸ್ಪರ್ಧೆಯನ್ನು ಎದುರಿಸುವ ಶಕ್ತಿ ನೀಡುತ್ತವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡದೆ, ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಡಾ. ಸಂಗಪ್ಪ ತೌಡಿ ಅವರು, ವ್ಯವಸ್ಥೆಯ ಸ್ಥಿತಿಗತಿಗೆ ಮಹಿಳೆ ಹೇಗೆ ಬಲಿಪಶು ಆಗುತ್ತಾಳೆ ಎನ್ನುವುದನ್ನು ಕುವೆಂಪು ಅವರ ಕಾನೂರು ಹೆಗ್ಗಡಿತಿ ಕಾದಂಬರಿ ಬಿಂಬಿಸುತ್ತದೆ ಎಂದು ಹೇಳಿದರು.
ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಮಾತನಾಡಿ, ಪುಸ್ತಕಕ್ಕೆ ತಲೆ ಬಾಗುವವರನ್ನು ಪುಸ್ತಕ ಜೀವನದಲ್ಲಿ ತಲೆ ಎತ್ತಿ ಬಾಳುವಂತೆ ಮಾಡುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ನಾಗಪ್ಪ ಜಾನಕನೋರ ಮಾತನಾಡಿ, ವಿದ್ಯಾರ್ಥಿಗಳು ಕತೆ, ಕವನದ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಉಪನ್ಯಾಸಕರಾದ ಈಶ್ವರ ರೆಡ್ಡಿ, ಡಾ. ಪಂಡಿತ ಗಂಗಶೆಟ್ಟಿ, ಬಸವರಾಜ ಬಿರಾದಾರ, ರಾಜಶೇಖರ ಸಜ್ಜನ್, ನಟರಾಜ್ ಸುತಾರ್, ನೆಹರೂ ಪವಾರ್, ದೇವೇಂದ್ರ ಪೂಜಾರಿ, ಮಂಗಲಾ, ವಿಜಯಲಕ್ಷ್ಮಿ, ಶ್ವೇತಾ, ಅರ್ಚನಾ, ಡಾ. ಪ್ರವೀಣ್, ಸಿಬ್ಬಂದಿ ಆಕಾಶ್, ಮಲ್ಲು, ಮಾಲಾಶ್ರೀ ಇದ್ದರು.
ಉಪನ್ಯಾಸಕಿ ರಾಜಮ್ಮ ನೇಳಗೆ ನಿರೂಪಿಸಿದರು. ರಾಖಿ ಕಾಡಗೆ ಸ್ವಾಗತಿಸಿದರು. ಸಪ್ನಾ ಸ್ವಾಮಿ ವಂದಿಸಿದರು.


























