Home ಜಿಲ್ಲೆ ಕಲಬುರಗಿ ರಾಜ್ಯ ಸರ್ಕಾರವೂ ದರ ಇಳಿಕೆಗೆ ಮುಂದಾಗಲಿ

ರಾಜ್ಯ ಸರ್ಕಾರವೂ ದರ ಇಳಿಕೆಗೆ ಮುಂದಾಗಲಿ

ಕಲಬುರಗಿ:ಮಾ.28: ಜಾಗತಿಕ ಸಂಕಷ್ಟದ ನಡುವೆಯೂ ಸಾಮಾನ್ಯ ಜನರ ಹಿತದೃಷ್ಟಿಯಿಂದ ತೈಲ ಮೇಲಿನ ಸುಂಕವನ್ನು ಕಡಿತಗೊಳಿಸಿರುವುದು ಕೇಂದ್ರ ಸರ್ಕಾರದ ಜನಪರ ಹಾಗೂ ಶ್ಲಾಘನೀಯ ನಿರ್ಧಾರವಾಗಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾಗತಿಕ ಮಟ್ಟದಲ್ಲಿ ಯುದ್ಧ ಪರಿಸ್ಥಿತಿ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಅನೇಕ ದೇಶಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಶೇಕಡಾ 20 ರಿಂದ 50ರವರೆಗೆ ಹೆಚ್ಚಳಗೊಂಡಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲೂ ದೇಶದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೈಲ ಮೇಲಿನ ಸುಂಕ ಕಡಿತಗೊಳಿಸಿರುವುದು ಜನಪರ ಆಡಳಿತದ ಉದಾಹರಣೆಯಾಗಿದೆ ಎಂದು ಹೇಳಿದರು.ಈ ಕ್ರಮದಿಂದ ದೇಶದ ಕೋಟ್ಯಂತರ ಜನರಿಗೆ ನೇರವಾಗಿ ನೆರವಾಗಿದ್ದು, ಸಾರಿಗೆ, ಕೃಷಿ ಹಾಗೂ ದೈನಂದಿನ ಜೀವನಕ್ಕೆ ಸಂಬಂಧಿಸಿದ ಖರ್ಚು ಕಡಿಮೆಯಾಗಲು ಸಹಕಾರಿಯಾಗಲಿದೆ.ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಜನರ ಪರವಾಗಿ ಪ್ರಧಾನಮಂತ್ರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ವಿದ್ಯುತ್ ದರ ಹೆಚ್ಚಳ, ಹಾಲು ಬೆಲೆ ಏರಿಕೆ, ಸಾರಿಗೆ ದರ ಹೆಚ್ಚಳ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ನಾಗಿ ಜನಸಾಮಾನ್ಯರು ಈಗಾಗಲೇ ಸಂಕಷ್ಟದಲ್ಲಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಮತ್ತಷ್ಟು ಹೊರೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರಾಜ್ಯ ಸುಂಕವನ್ನು ಕಡಿತಗೊಳಿಸಿ ಜನರಿಗೆ ನೆರವಾಗಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಜನಪರ ಆಡಳಿತ ನೀಡುವುದಾಗಿ ಹೇಳಿಕೊಂಡಿದ್ದರೂ, ನಿರಂತರವಾಗಿ ಬೆಲೆ ಏರಿಕೆ ಮೂಲಕ ಜನರ ಮೇಲೆ ಆರ್ಥಿಕ ಹೊರೆ ಹಾಕುತ್ತಿರುವುದು ಖಂಡನೀಯ. ರೈತರು,ಕಾರ್ಮಿಕರು, ಮಧ್ಯಮ ವರ್ಗದ ಜನರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ಜನರ ಪರವಾಗಿ ನಿಲ್ಲಬೇಕಾದರೆ ತಕ್ಷಣ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರಕಾರವು ಸುಂಕ ಕಡಿತಗೊಳಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ತೈಲ ಬೆಲೆ ಏರಿಕೆಯಿಂದ ರೈತರು, ಕಾರ್ಮಿಕರು, ಮಧ್ಯಮ ವರ್ಗದ ಜನರು ಹಾಗೂ ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗುತ್ತಿರುವುದರಿಂದ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.ಜನ ಸಾಮಾನ್ಯರ ಹಿತವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ರಾಜ್ಯ ಸರ್ಕಾರ ತಕ್ಷಣವೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರಾಜ್ಯ ಸುಂಕವನ್ನು ಕಡಿತಗೊಳಿಸಿ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜನರ ಮೇಲಿನ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದರು.