ರಜಾಕಾರರಿಗೆ ಸಿಂಹಸ್ವಪ್ನವಾಗಿದ್ದ ಕುಳಗೇರಿ

ಕಲಬುರಗಿ:ಮಾ.3: ಸ್ವಾತಂತ್ರ್ಯ ಹೋರಾಟಗಾರರು, ಸಹಕಾರಿ ಧುರೀಣರು ಆಗಿದ್ದ ಚನ್ನಬಸಪ್ಪ ಕುಳಗೇರಿ ಅವರು, ರಜಾಕಾರರ ವಿರುದ್ಧ ಹೇಗೆ ಹೋರಾಡಿದರೋ ಅದೇರೀತಿ ಸ್ವಜನಪಕ್ಷಪಾತ, ವಂಚನೆ, ಭ್ರಷ್ಟಾಚಾರ, ಕಾಳಸಂತೆ ಮಾರಾಟಗಳ ವಿರುದ್ಧವೂ ಸಿಡಿದೆದ್ದಿರು ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ನಗರದ ಎಚ್.ಕೆ.ಇ. ಸೊಸೈಟಿಯ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳಾ ವಿಜ್ಞಾನ, ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಉಪನ್ಯಾಸ ಮಾಲಿಕೆಯಲ್ಲಿ ಹೈದರಾಬಾದ ಸಂಸ್ಥಾನ ವಿಮೋಚನಾ ಹೋರಾಟಗಾರ ಚನ್ನಬಸಪ್ಪ ಕುಳಗೇರಿ ಕುರಿತು ಮಾತನಾಡಿದ ಅವರು, ಕುಳಗೇರಿಯವರು ಹೈ.ಕ. ಶಿಕ್ಷಣ ಸಂಸ್ಥೆಯ ಬೆಳವಣಿಗೆಗೂ ಕಾರಣರಾಗಿದ್ದರು ಎಂದು ತಿಳಿಸಿದರು.

ನಿಜಾಮ ಅರಸ ಮೀರ್ ಉಸ್ಮಾನ ಅಲಿ ಖಾನ್ ಸಂಸ್ಥಾನದ ರಜಾಕಾರರ ಕಾಟೋ, ಲೂಟೋ, ಬಾಟೋ ವಿರುದ್ಧ ಕ್ವಿಟ್ ಕಾಲೇಜ್, ಟಿಟ್ ಫಾರ್ ಟ್ಯಾಟ್ ಚಳವಳಿ ರೂಪಿಸಿ ಕರ್ನಾಟಕದ ಚಂದ್ರಶೇಖರ ಆಜಾದ್ ಎಂದೇ ಗುರುತಿಸಿಕೊಂಡಿದ್ದರು. ರಜಾಕಾರರಿಗೆ ಸಿಂಹಸ್ವಪ್ನವಾಗಿದ್ದರು ಎಂದು ಆ ಸಂದರ್ಭದ ರೋಚಕ ಇತಿಹಾಸವನ್ನು ವಿವರಿಸಿದರು.

ಮುಖ್ಯ ಅತಿಥಿಯಾಗಿದ್ದ ಅಮರನಾಥ ಪಾಟೀಲ ಕುಳಗೇರಿ ಮಾತನಾಡಿ, ಹೈ.ಕ. ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮಹಾದೇವಪ್ಪ ರಾಂಪುರೆಯವರ ಸಲಹೆಗಾರರಾಗಿದ್ದ ಜಿ.ಆರ್. ಪಾಟೀಲ,ಸೂರಜ್ ಮಲ್ಲ ಲಾಹೋಟಿ, ಗಂಗಸಿರಿ, ಸಿದ್ದಪ್ಪ ಮರಗೋಳ್, ಭೂಮರೆಡ್ಡಿ, ಹೋಮಿ ಇರಾಣಿ ಮುಂತಾದ ಮುಖ್ಯರಲ್ಲಿ ನಮ್ಮ ತಂದೆ ಚನ್ನಬಸಪ್ಪ ಕುಳಗೇರಿ ಕೂಡ ಒಬ್ಬರಾಗಿದ್ದರು. ವಿ.ಜಿ. ಮಹಿಳಾ ಕಾಲೇಜು, ಮೆಡಿಕಲ್ ಕಾಲೇಜಿನ ವಸತಿ ಗೃಹ ಆರಂಭಿಸಲು ಅವರು ಸಲಹೆ ನೀಡಿದ್ದರು ಎಂಬುದನ್ನು ಸ್ಮರಿಸಿಕೊಂಡರು.

ಮಹಿಳಾ ಕಾಲೇಜಿನ ಸಮನಚಾಲಕರು ಹಾಗೂ ಹೈ.ಕ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಮಹಾದೇವಪ್ಪ ರಾಂಪುರೆ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ನಾಗಣ್ಣ ಎಸ್. ಘಂಟಿ ವೇದಿಕೆಯಲ್ಲಿದ್ದರು.

ಪ್ರಾಚಾರ್ಯರಾದ ಎನ್.ಜಿ. ಪಾಟೀಲ ಸ್ವಾಗತಿಸಿದರು. ಡಾ. ಮಹೇಶ ಗಂವ್ಹಾರ ಪ್ರಾಸ್ತಾವಿಕ ಮಾತನಾಡಿದರು. ಕವಿತಾ ಸಾವಳಗಿ ನಿರೂಪಿಸಿದರು. ಶರಣಪ್ರಕಾಶ ಆಲೂರ ವಂದಿಸಿದರು.
ಅಕ್ಷರಾ ಜೋಶಿ ಮತ್ತು ಮಾನ್ಯತಾ ಪ್ರಾರ್ಥನೆಗೀತೆ ಹಾಡಿದರು.