
ಕೊಪ್ಪಳ.ಫೆ೨೪: ಬಲ್ದೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಕೊಪ್ಪಳ ನಗರದಲ್ಲಿ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ. ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆ ೭ ಗಂಟೆಯಿಂದ ಬಂದ್ ಆರಂಭಗೊಂಡಿದ್ದು, ನಗರದ ಬಹುತೇಕ ಅಂಗಡಿ-ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿವೆ. ಹೋಟೆಲ್ ಮಾಲೀಕರ ಸಂಘವೂ ಬೆಂಬಲ ಸೂಚಿಸಿರುವ ಹಿನ್ನೆಲೆ ಅನೇಕ ಹೋಟೆಲ್‌ಗಳು ತೆರೆಯದೇ ಬಂದ್‌ಗೆ ಕೈಜೋಡಿಸಿವೆ. ಖಾಸಗಿ ಶಾಲೆಗಳ ಒಕ್ಕೂಟ ಬಂದ್‌ಗೆ ಬೆಂಬಲ ನೀಡಿ ಇಂದು ರಜೆ ಘೋಷಿಸಿದೆ. ಇದೇ ವೇಳೆ ಕೊಪ್ಪಳ ವಿಶ್ವವಿದ್ಯಾಲಯವು ಸ್ನಾತಕೋತ್ತರ ಮೊದಲನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ.
ಆದರೆ ಜನಜೀವನದ ಮೇಲೆ ಹೆಚ್ಚಿನ ಪರಿಣಾಮ ಕಾಣಿಸದಂತೆ ಬಸ್ ಸಂಚಾರ ಎಂದಿನಂತೆ ಮುಂದುವರಿದಿದೆ. ಬಂದ್ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ನಗರದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಪ್ರಮುಖ ವೃತ್ತಗಳು, ಬಸ್ ನಿಲ್ದಾಣ ಮತ್ತು ಸಂವೇದನಶೀಲ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕಳೆದ ವರ್ಷ ಫೆಬ್ರವರಿ ೨೪ರಂದು ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಆ ಹೋರಾಟಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಂಟಿ ಕ್ರಿಯಾಸಮಿತಿ ಇಂದು ಬಂದ್‌ಗೆ ಕರೆ ನೀಡಿದೆ. ಜಿಲ್ಲಾ ಬಚಾವೋ ಆಂದೋಲನ ಸಮಿತಿ ಕಳೆದ ೧೧೭ ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದೆ.
ಬಂದ್‌ಗೆ ವಕೀಲರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಬೆಳಿಗ್ಗೆ ೭ ಗಂಟೆಗೆ ಕೊಪ್ಪಳ ಹಾಗೂ ಭಾಗ್ಯನಗರದಲ್ಲಿ ಬೈಕ್ ಮತ್ತು ಆಟೋ ರ್‍ಯಾಲಿ ನಡೆಸಲಾಗಿದ್ದು, ಹೋರಾಟಗಾರರು ವ್ಯಾಪಾರಸ್ಥರಿಗೆ ಸ್ವಯಂಪ್ರೇರಿತವಾಗಿ ಬಂದ್ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಬಸ್ ನಿಲ್ದಾಣ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಬೈಕ್ ರ್‍ಯಾಲಿ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಬೆಳಿಗ್ಗೆ ೧೦ ಗಂಟೆಗೆ ಗವಿಮಠದಿಂದ ಆರಂಭವಾದ ರ್‍ಯಾಲಿ ಗಡಿಯಾರ ಕಂಬ, ಅಶೋಕ ವೃತ್ತದ ಮೂಲಕ ನಗರಸಭೆ ಪ್ರತಿಭಟನಾ ಸ್ಥಳದಲ್ಲಿ ಅಂತ್ಯಗೊಂಡಿತು. ರ್‍ಯಾಲಿ ಬಳಿಕ ನಗರಸಭೆ ಮುಂಭಾಗದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
ವೇದಿಕೆ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ, ಗದಗ ತೋಂಟದ ಸಿದ್ದಲಿಂಗ ಶ್ರೀಗಳು, ಕಬೀರಾನಾನಂದ ಸ್ವಾಮೀಜಿಗಳು, ‘ಪರಿಸರಕ್ಕಾಗಿ ನಾವು’ ಸಂಘಟನೆಯ ಎ.ಟಿ. ರಾಮಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಆದರೆ ಗವಿಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮದಲ್ಲಿ ಗೈರಾಗಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಹೋರಾಟಗಾರರು ಬಲ್ಡೋಟಾ ಕಂಪನಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆ ವಿಸ್ತರಣೆ ಯೋಜನೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.





























