
ತುಮಕೂರು, ಮಾ. ೩೧- ಕಾಯಕ ಯೋಗಿ, ಅಭಿನವ ಬಸವಣ್ಣ, ಮಹಾ ಮಾನವತಾವಾದಿ, ತ್ರಿವಿಧ ದಾಸೋಹಿ, ಯುಗದ ಸಂತ, ನಡೆದಾಡುವ ದೇವರೆಂದೇ ನಾಡಿನಾದ್ಯಂತ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ೧೧೯ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಆಗಮಿಸುತ್ತಿರುವ ದೇಶದ ೨ನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ರವರನ್ನು ಅಭೂತ ಪೂರ್ವವಾಗಿ ಸ್ವಾಗತಿಸಲು ಕಲ್ಪತರುನಾಡು ಸರ್ವ ರೀತಿಯಲ್ಲೂ ಸಜ್ಜಾಗಿ ನಿಂತಿದೆ.
ದೇಶದ ೨ನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ ಮೊದಲ ಬಾರಿಗೆ ಇತಿಹಾಸ ಪ್ರಸಿದ್ದ, ಪವಾಡ ಪುಣ್ಯ ಪುರುಷ ಮೆಟ್ಟಿದ ನಾಡು ಸಿದ್ದಗಂಗೆಗೆ ನಾಳೆ (ಏ. ೧) ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅವರನ್ನು ಶಿಷ್ಟಾಚಾರಗಳನ್ನು ಪಾಲಿಸಿ ಭವ್ಯವಾಗಿ ಬರ ಮಾಡಿಕೊಳ್ಳಲು ಸಿದ್ದಗಂಗಾ ಮಠ ಹಾಗೂ ತುಮಕೂರು ಜಿಲ್ಲಾಡಳಿತ ಸನ್ನದ್ಧವಾಗಿವೆ.
ಇಂದು ಸಂಜೆ ಬೆಂಗಳೂರಿಗೆ ಆಗಮಿಸುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾತ್ರಿ ಲೋಕಭವನದಲ್ಲಿ ವಾಸ್ತವ್ಯ ಹೂಡಿ ನಾಳೆ ಬೆಳಿಗ್ಗೆ ೧೦.೩೦ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಆವರಣದ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ನಂತರ ಅವರು ಕಾರಿನಲ್ಲಿ ರಸ್ತೆ ಮೂಲಕ ಶ್ರೀಮಠಕ್ಕೆ ಆಗಮಿಸಿ ಮೊದಲು ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಭಕ್ತಿ ಸಮರ್ಪಿಸಲಿದ್ದಾರೆ. ನಂತರ ಶ್ರೀಮಠದ ೧೦ ಸಾವಿರ ಮಕ್ಕಳೊಂದಿಗೆ ಸಂವಾದ ನಡೆಸುವರು ಎಂದು ಹೇಳಲಾಗಿದೆ.
ರಾಷ್ಟ್ರಪತಿಗಳೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮೀಜಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯ ಸರ್ಕಾರದ ನವೆದಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ, ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಈಗಾಗಲೇ ಡಾ. ಶಿವಕುಮಾರ ಸ್ವಾಮೀಜಿಯವರ ಜನ್ಮಜಯಂತಿ ಹಾಗೂ ಗುರುವಂದನಾ ಮಹೋತ್ಸವಕ್ಕೆ ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ವಿಜ್ಞಾನಿ ಮತ್ತು ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ರವರು ಭೇಟಿ ನೀಡಿ ಭಕ್ತಿ ಸಮರ್ಪಿಸಿದ್ದರು. ಇದೀಗ ಶ್ರೀಗಳ ೧೧೯ನೇ ಜಯಂತಿಗೆ ೨ನೇ ಮಹಿಳಾ ರಾಷ್ಟ್ರಪತಿಗಳು ಆಗಮಿಸುತ್ತಿರುವುದು ವಿಶೇಷವಾಗಿದೆ.
ಕಲ್ಪತರುನಾಡಿಗೆ ಮೊದಲನೇ ಬಾರಿಗೆ ಭೇಟಿ ನೀಡುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ರವರನ್ನು ನೋಡಲು ಜಿಲ್ಲೆಯ ಜನತೆ ಹಾಗೂ ಶ್ರೀಮಠದ ಭಕ್ತ ಸಮೂಹ ಕಾತರದಿಂದ ಕಾಯುತ್ತಿದೆ.
ಶ್ರೀಗಳ ೧೧೯ನೇ ಜಯಂತಿಯಲ್ಲಿ ರಾಷ್ಟ್ರಪತಿಗಳು ಭಾಗಿಯಾಗುತ್ತಿರುವುದರಿಂದ ಭದ್ರತಾ ದೃಷ್ಠಿಯಿಂದ ಭಕ್ತಾದಿಗಳು ಛತ್ರಿ, ಬ್ಯಾಗ್, ಕುಡಿಯುವ ನೀರಿನ ಬಾಟಲ್‌ಗಳು ತರುವುದನ್ನು ನಿಷೇಧಿಸಲಾಗಿದೆ. ಜತೆಗೆ ಮೊಬೈಲ್‌ಗಳು ಸ್ವಿಚ್ ಆಫ್ ಮೂಡ್‌ನಲ್ಲಿ ಇಡುವಂತೆಯೂ ಈಗಾಗಲೇ ಶ್ರೀಮಠ ಭಕ್ತ ಸಮೂಹದಲ್ಲಿ ಮನವಿ ಮಾಡಿದೆ.
ಶ್ರೀಗಳ ೧೧೯ನೇ ಜಯಂತಿಗೆ ಆಗಮಿಸುವ ವಿವಿಧ ಮಠಾಧೀಶರು, ಹರಗುರುಚರಮೂರ್ತಿಗಳು ಸೇರಿದಂತೆ ಗಣ್ಯಾತಿ ಗಣ್ಯರನ್ನು ಅಭೂತಪೂರ್ವವಾಗಿ ಸ್ವಾಗತಿಸಿ ಶ್ರೀಕ್ಷೇತ್ರ ಸಿದ್ದಗೊಂಡಿದೆ.
ಶ್ರೀಕ್ಷೇತ್ರ ತಳಿರು ತೋರಣ, ಬಾಳೆ ಕಂದುಗಳಿಂದ ಕಂಗೊಳಿಸುತ್ತಿದ್ದು, ನಡೆದಾಡುವ ದೇವರ ೧೧೯ನೇ ಜಯಂತಿಯನ್ನು ವಿಶೇಷ ಹಬ್ಬದೋಪಾದಿಯಲ್ಲಿ ಆಚರಿಸಲು ಸಿದ್ದಗಂಗಾ ಕ್ಷೇತ್ರ ಸರ್ವಾಲಂಕೃತಗೊಂಡಿದ್ದು, ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಪ್ಲಕ್ಸ್‌ಗಳ ಭರಾಟೆ
ರಾಷ್ಟ್ರಪತಿಗಳು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಶ್ರೀಮಠ ಹಾಗೂ ಶ್ರೀಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ರಾಷ್ಟ್ರಪತಿಗಳು, ಶ್ರೀಗಳು ಹಾಗೂ ಕೇಂದ್ರ ಸಚಿವರ ಭಾವಚಿತ್ರ ಇರುವ ಪ್ಲಕ್ಸ್‌ಗಳು, ಬೃಹತ್ ಕಟೌಟ್‌ಗಳು ರಾರಾಜಿಸುತ್ತಿದ್ದು, ಭಕ್ತ ಸಮೂಹವನ್ನು ಶ್ರೀಕ್ಷೇತ್ರದತ್ತ ಕೈ ಬೀ ಕರೆಯುತ್ತಿವೆ.
ಮಾರ್ಗ ಬದಲಾವಣೆ
ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿಗಳು ಭೇಟಿ ನೀಡುತ್ತಿರುವುದರಿಂದ ಶ್ರೀಕ್ಷೇತ್ರಕ್ಕೆ ಶ್ರೀಗಳ ೧೧೯ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತಾದಿಗಳಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ತುಮಕೂರು ನಗರದ ಕಡೆಯಿಂದ ಶ್ರೀಮಠಕ್ಕೆ ಬರುವ ಭಕ್ತಾದಿಗಳು ಬಂಡೆಪಾಳ್ಯ ಮುಖೇನ ಹಾಗೂ ಕ್ಯಾತ್ಸಂದ್ರ ಕಡೆಯಿಂದ ಬರುವವರು ಅಂಡರ್ ಪಾಸ್ ಮೂಲಕ ಶ್ರೀಕ್ಷತ್ರಕ್ಕೆ ಬರುವಂತೆ ಪರ್ಯಾಯ ಮಾರ್ಗಗಳನ್ನು ವ್ಯವಸ್ಥೆ ಮಾಡಲಾಗಿದೆ.
ಭದ್ರತೆಗೆ ೧೫ ಸಾವಿರ ಪೊಲೀಸರು
ಸಿದ್ದಗಂಗಾ ಮಠಕ್ಕೆ ಏ. ೧ ರಂದು ರಾಷ್ಟ್ರಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕಾರ್ಯಕ್ಕಾಗಿ ಸುಮಾರು ೧೫ ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ತುಮಕೂರು ವಿಶ್ವವಿದ್ಯಾನಿಲಯದ ಹೆಲಿಪ್ಯಾಡ್‌ನಿಂದ ಹಿಡಿದು ರಾಷ್ಟ್ರಪತಿಗಳು ಶ್ರೀಕ್ಷೇತ್ರಕ್ಕೆ ತೆರಳುವ ಮಾರ್ಗದುದ್ದಕ್ಕೂ ಪೊಲೀಸ್ ಪಹರೆ ಹಾಕಲಾಗಿದೆ.
ಇನ್ನು ಸಿದ್ದಗಂಗಾ ಕ್ಷೇತ್ರದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಲಿದ್ದು, ಭದ್ರತಾ ದೃಷ್ಠಿಯಿಂದ ಶ್ರೀಮಠಕ್ಕೆ ಆಗಮಿಸುವ ಭಕ್ತಾದಿಗಳು ಬೆಳಿಗ್ಗೆ ೯.೩೦ ರೊಳಗೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಆಸೀನರಾಗುವಂತೆ ಶ್ರೀಮಠದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಸೂಚನೆ ನೀಡಿದೆ.






























