ಕೈ ಶಾಸಕರ ಡಿನ್ನರ್ ಸಭೆ

೩೫ ಕ್ಕೂ ಹೆಚ್ಚು ಶಾಸಕರು ಭಾಗಿ

ಬೆಂಗಳೂರು, ಫೆ. ೨೭- ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಕಾಂಗ್ರೆಸ್‌ನ ೩೫ ಕ್ಕೂ ಹೆಚ್ಚು ಶಾಸಕರು ನಿನ್ನೆ ರಾತ್ರಿ ಔತಣಕೂಟ ನಡೆಸಿ ನಾಯಕತ್ವ ಗೊಂದಲಗಳನ್ನು ಬಗೆಹರಿಸುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ.


ಉಪಮುಖ್ಯಮಂತ್ರಿ ಡಿಕೆಶಿ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಮಾಗಡಿಯ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ರಾತ್ರಿ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್‌ನ ೩೫ ಕ್ಕೂ ಹೆಚ್ಚು ಶಾಸಕರು ಔತಣಕೂಟ ಸಭೆಯಲ್ಲಿ ಭಾಗಿಯಾಗಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ರಾಜ್ಯದಲ್ಲಿನ ನಾಯಕತ್ವ ಬಿಕ್ಕಟ್ಟುಗಳಿಗೆ ತೆರೆ ಎಳೆಯುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.


ನಾಯಕತ್ವ ಗೊಂದಲಗಳು ರಾಜ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿರುವುದಲ್ಲದೆ ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ. ಜನರಿಗೂ ತಪ್ಪು ಸಂದೇಶ ರವಾನೆಯಾಗುತ್ತಿದ್ದು, ಪಕ್ಷದ ಹಿತದೃಷ್ಟಿಯಿಂದ ನಾಯಕತ್ವ ಗೊಂದಲಗಳಿಗೆ ತೆರೆ ಎಳೆಯಿರಿ ಎಂದು ಶಾಸಕ ಬಾಲಕೃಷ್ಣ ಅವರ ಹುಟ್ಟುಹಬ್ಬದ ಔತಣಕೂಟದಲ್ಲಿ ಭಾಗಿಯಾಗಿದ್ದ ಶಾಸಕರು ಹೈಕಮಾಂಡ್‌ಗೆ ಮನವಿ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.


ಈ ಔತಣಕೂಟ ಸಭೆಯಲ್ಲಿ ಕಾಂಗ್ರೆಸ್‌ನ ೩೫ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದು, ಸಚಿವರಾದ ಡಿ. ಸುಧಾಕರ್, ಮಾಕಾಂಳ ವೈದ್ಯ ಸಹ ಭಾಗಿಯಾಗಿದ್ದರು. ಇವರ ಜತೆಗೆ ಶಾಸಕರುಗಳಾದ ಸಿ.ಪಿ. ಯೋಗೀಶ್ವರ್, ಉದಯಗೌಡ ಕದಲೂರು, ರವಿ ಗ ಣಿಗ, ರಮೇಶ್ ಬಂಡಿಸಿದ್ದೇಗೌಡ, ಆನೆಕಲ್ಲು ಶಿವಣ್ಣ, ಕುಣಿಗಲ್ ರಂಗನಾಥ್, ಸಿರಾ ಶಾಸಕ ಟಿ.ಬಿ.ಜಯಚಂದ್ರ, ಮೂಡಿಗೆರೆಯ ನಯನ ಮೋಟಮ್ಮ, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್, ಬಸವರಾಜು ಶಿವಗಂಗಾ, ಪ್ರಕಾಶ್ ಕೋಳಿವಾಡ, ಗಣೇಶ್ ಹುಕ್ಕೇರಿ, ಶರತ್ ಬಚ್ಚೇಗೌಡ, ಮಂಥರ್‌ಗೌಡ, ಹೊನ್ನಾಳಿ ಶಾಸಕ ಶಾಂತನಗೌಡ ಸೇರಿದಂತೆ ೩೫ ಕ್ಕೂ ಹೆಚ್ಚು ಶಾಸಕರು ಈ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.


ರಾಜ್ಯದಲ್ಲಿ ಬಜೆಟ್ ಮಂಡನೆ ನಂತರ ದೆಹಲಿಗೆ ತೆರಳಿ ಹೈಕಮಾಂಡ್ ಮುಂದೆ ತಮ್ಮ ಬೇಡಿಕೆ ಸಲ್ಲಿಸಲು ಈ ಶಾಸಕರು ತೀರ್ಮಾನ ಕೈಗೊಂಡಿದ್ದಾರೆ.


ಅಧಿಕಾರ ಹಂಚಿಕೆ ಹೈಕಮಾಂಡ್ ಮಟ್ಟದಲ್ಲಿ ಏನು ತೀರ್ಮಾನವಾಗಿದೆಯೇ ತಮಗೆ ಗೊತ್ತಿಲ್ಲ. ಒಂದು ವೇಳೆ ಅಧಿಕಾರ ಹಂಚಿಕೆಯ ತೀರ್ಮಾನ ಆಗಿದ್ದರೆ ಅದರಂತೆ ನಡೆದುಕೊಳ್ಳಬೇಕು. ಒಂದು ವೇಳೆ ಆ ರೀತಿಯ ತೀರ್ಮಾನಗಳು ಆಗದಿದ್ದರೆ ನಾಯಕತ್ವ ಬದಲಾವಣೆ ಬಗ್ಗೆ ಒಂದು ಸ್ಪಷ್ಟ ತೀರ್ಮಾನ ಕೈಗೊಂಡು ಎಲ್ಲ ಗೊಂದಲಗಳನ್ನೂ ಪರಿಹರಿಸಿ ಎಂದು ವರಿಷ್ಠ ನಾಯಕರನ್ನು ಮನವಿ ಮಾಡಲು ಈ ಶಾಸಕರುಗಳು ನಿರ್ಧರಿಸಿದ್ದಾರೆ.


ಬಜೆಟ್ ಮಂಡನೆ ನಂತರ ಹೈಕಮಾಂಡ್ ನಾಯಕರ ಭೇಟಿಯ ಸಮಯ ತೆಗೆದುಕೊಂಡು ೮-೧೦ ಶಾಸಕರು ದೆಹಲಿಗೆ ತೆರಳಿ ರಾಜ್ಯ ಕಾಂಗ್ರೆಸ್ ವಿದ್ಯಮಾನ, ಪರಿಸ್ಥಿತಿ ಎಲ್ಲವನ್ನು ಹೈಕಮಾಂಡ್ ಗಮನಕ್ಕೆ ತಂದು ನಾಯಕತ್ವ ಗೊಂದಲಗಳಿಗೆ ತೆರೆ ಎಳೆಯುವಂತೆ ಹಕ್ಕೋತ್ತಾಯ ಮಂಡಿಸಲು ಈ ಸ ಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರುಗಳು ತೀರ್ಮಾನಿಸಿದರು ಎಂದು ಹೇಳಲಾಗಿದೆ.


ಈ ಔತಣಕೂಟದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿದೆ.


ಮುಖ್ಯಮಂತ್ರಿ ಸಿದ್ಧರಾಮಯ್ಯ ಆಪ್ತ ಬಣದ ಶಾಸಕರು ವಿದೇಶಿ ಪ್ರವಾಸ ಕೈಗೊಂಡಿರುವಾಗಲೇಡಿಕೆಶಿ ಆಪ್ತರ ಬಣದ ಶಾಸಕರು ಹುಟ್ಟುಹಬ್ಬದ ನೆಪದಲ್ಲಿ ಔತಣಕೂಟ ಸಭೆ ನಡೆಸಿರುವುದು ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ.


ಮುಂದಿನದಿನಗಳಲ್ಲಿ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಗೊಂದಲಗಳನ್ನು ಪರಿಹರಿಸುವ ಅನಿವಾರ್ಯತೆಯನ್ನೂ ಸೃಷ್ಠಿಸಿದೆ.