ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಜ್ಯೋತಿಶ್ರೀ’ ಪ್ರಶಸ್ತಿ ಪ್ರದಾನ

ಕೋಲಾರ, ಫೆ.೯- ಶಿಕ್ಷಣದೊಂದಿಗೆ ಮಾನವೀಯತೆ, ಆತ್ಮವಿಶ್ವಾಸ, ದೇವರ ಭಯದ ಜತೆಗೆ ತಾಳ್ಮೆ ಇರುವವನ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.


ನಗರದ ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿನ ಜ್ಯೋತಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ಗಾಣಿಗೇತರ ಸಮುದಾಯಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಜ್ಯೋತಿಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.


ಈ ದೇಶ ಬಲಿಷ್ಟವಾಗಲು ರಾಜಕಾರಣಿ,ಶಾಸಕ,ಸಂಸದರು ಬಲಿಷ್ಟರಾದರೆ ಸಾಧ್ಯವಿಲ್ಲ, ಈ ದೇಶದ ಯುವಶಕ್ತಿ ಬಲಿಷ್ಟವಾದಾಗ ಮಾತ್ರ ಬಲಿಷ್ಟತೆ ಸಾಧ್ಯ ಎಂದ ಅವರು, ಸಮಾನತೆಯಿಂದ ಎಲ್ಲಾ ಜಾತಿಗಳ ಮಕ್ಕಳನ್ನು ಪುರಸ್ಕರಿಸುತ್ತಿರುವ ಜ್ಯೋತಿ ಎಜುಕೇಷನ್ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.


ತಂದೆತಾಯಿಯ ಆಸ್ತಿಗೆ ಕಾಯದಿರಿ, ನೀವು ದೇಶದ ಸಂಪತ್ತಾಗಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ, ರಾಜನಾಗುವವನ ಕಿರೀಟ ವಜ್ರಗಳಲ್ಲಿ ಇಲ್ಲ, ಅವನ ತಾಳ್ಮೆಯಲ್ಲಿದೆ ಎಂದ ಅವರು, ಈ ದೇಶದಲ್ಲಿ ಸಮಾನತೆಯ ಸಂದೇಶ ಸಾರಿ ಸರ್ವರು ಒಂದೇ ಎಂಬ ಸಂದೇಶವನ್ನು ನಮ್ಮ ಸಂವಿಧಾನ ಸಾರಿದೆ, ದೇವರೆ ನಮ್ಮ ನಡುವೆ ತಾರತಮ್ಯ ಮಾಡಿಲ್ಲ, ಅದೇ ಕಾಲು,ಕೈ,ತಲೆ, ರಕ್ತ ಎಂದ ಮೇಲೆ ನಮ್ಮನಮ್ಮಲ್ಲಿ ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.


ಈ ದೇಶದ ಸಂಸ್ಕೃತಿ,ಪರಂಪರೆ ಉಳಿಸಿಕೊಳ್ಳುವ ಮೂಲಕ ಈ ದೇಶವನ್ನು ಬಲಿಷ್ಟಗೊಳಿಸೋಣ, ಇಡೀ ವಿಶ್ವವೇ ಭಾರತದಿಂದ ನಮಗೆ ಭವಿಷ್ಯವಿದೆ ಎಂದು ನಮ್ಮತ್ತ ನೋಡುತ್ತಿದೆ, ಇಲ್ಲಿನ ಯುವಶಕ್ತಿ, ಮಾನವ ಸಂಪನ್ಮೂಲ ವಿಶ್ವವನ್ನೆ ಬೆರಗು ಮಾಡಿದೆ ಎಂದು ತಿಳಿಸಿದರು.


ಸಂಸದ ಎಂ.ಮಲ್ಲೇಶಬಾಬು ಮಾತನಾಡಿ, ಇದು ವಿಭಿನ್ನವಾದ ಕಾರ್ಯಕ್ರಮ, ಆಯಾ ಜಾತಿಗಳ ಆಧಾರದ ಮೇಲೆ ಪ್ರತಿಭಾ ಪುರಸ್ಕಾರ ನಡೆಯುತ್ತಿದೆ ಆದರೆ ಇಲ್ಲಿ ಸುದರ್ಶನ್ ಅವರು ಇಡೀ ಸಮುದಾಯಕ್ಕೆ ಜಾತಿ ಬೇಧ ಎಣಿಸದೇ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಇದು ಶ್ಲಾಘನೀಯ ಕಾರ್ಯ ಎಂದರು.


ಇಂತಹ ಅಪರೂಪದ ಕಾರ್ಯಕ್ರಮಕ್ಕೆ ತಮ್ಮ ಒಂದು ತಿಂಗಳ ವೇತನವನ್ನು ಕೊಡುಗೆಯಾಗಿ ನೀಡುವುದಾಗಿ ತಿಳಿಸಿದ ಅವರು, ಇದರ ಜತೆಗೆ ಬುದ್ದಿ ಜೀವಿಗಳನ್ನು ಪುರಸ್ಕರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.


ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ತಂತ್ರಜ್ಞಾನದ ವೈಭವೀಕರಣ ಯುವ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ, ಈ ತಂತ್ರಜ್ಞಾನ ಎಂದಿಗೂ ಮನುಷ್ಯನ ಭಾವನೆಗೆ ಸರಿಸಾಟಿಯಲ್ಲ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.


ಮೊಬೈಲ್‌ನಿಂದಾಗಿ ಇಂದು ಅವಿಭಕ್ತ ಕುಟುಂಬಗಳು ಇಲ್ಲವಾಗಿದೆ, ಮನುಷ್ಯರು, ಸಂಬಂಧಗಳ ನಡುವೆ ಸಂವಹನ ಇಲ್ಲವಾಗಿದೆ, ಮನೆಯ ಒಂದು ಕೊಠಡಿಯಲ್ಲಿ ಮೊಬೈಲ್‌ಗೆ ದಾಸರಾದರೆ ಅವನ್ನು ಮೆಸೇಜ್ ಮೂಲಕ ಕರೆಯುವ ಕೆಲಸವಾಗುತ್ತಿದೆ ಎಂದು ವಿಷಾದಿಸಿದರು.


ವಿ.ಆರ್.ಸುದರ್ಶನ್ ಈ ನಾಡು ಕಂಡ ಅದ್ಬುತ ರಾಜಕಾರಣಿ, ಧ್ವನಿಯಿಲ್ಲದ ಸಮುದಾಯಗಳಿಗೆ ಧ್ವನಿಯಾದವರು, ನಾಲ್ಕು ದಶಕಗಳಿಂದ ಅವರ ಪರಿಚಯವಿದೆ ಎಂದ ಅವರು, ಹಿಂದುಳಿದ ವರ್ಗಗಳ ಪರವಾದ ಹೋರಾಟ, ಅರಸು ಪ್ರತಿಮೆ ಕುರಿತ ಹೋರಾಟದಲ್ಲಿ ಅವರೊಂದಿಗೆ ಒಡನಾಟ ಹೊಂದಿದ್ದನ್ನು ಸ್ಮರಿಸಿದರು.


ಜ್ಯೋತಿಶ್ರೀ ಪ್ರಶಸ್ತಿಗೆ ಭಾಜನರಾದ ಬಿ.ವಿ.ಗೋಪಿನಾಥ್, ಪ್ರೊ.ಬಿ.ವಿ.ಕೃಷ್ಣಪ್ಪ, ಜನವಾದಿ ಸಂಘಟನೆಯ ಗೀತಾ ಮತ್ತಿತರರು ಮಾತನಾಡಿ, ವಿ.ಆರ್. ಸುದರ್ಶನ್ ಅವರ ಅಭಿವೃದ್ದಿಪರ ಕಾಳಜಿ ಜಿಲ್ಲೆ ಬಳಸಿಕೊಳ್ಳುವಲ್ಲಿ ವಿಫಲವಾಯಿತು ಆದರೆ ನಿರಾಸೆ ಮೀರಿ ಸುದರ್ಶನ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಜ್ಯೋತಿ ಎಜುಕೇಷನ್ ಟ್ರಸ್ಟ್ ಮೂಲಕ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಇತರೆ ಸಮುದಾಯಗಳ ವಿವಿಧ ಕ್ಷೇತ್ರಗಳ ಸಾಧಕರಾದ ಪಿಚ್ಚಳ್ಳಿ ಶ್ರೀನಿವಾಸ್, ಬಿ.ವಿ.ಗೋಪಿನಾಥ್, ಪ್ರೊ.ಬಿ.ವಿ.ಕೃಷ್ಣಪ್ಪ ಅತಾವುಲ್ಲಾಖಾನ್, ಫಾಸ್ಟ್ರರ್ ಸುರೇಶ್ ಜೇಮ್ಸ್, ಡಾ.ಪಾಪಿರೆಡ್ಡಿ, ತುರಾಂಡಹಳ್ಳಿ ರವಿ, ಕಾಗತಿ ವೆಂಕಟರತ್ನ ಅವರಿಗೆ ‘ಜ್ಯೋತಿಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸ ಲಾಯಿತು. ಡಾ.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜ್ಯೋತಿ ಎಜುಕೇಷನಲ್ ಟ್ರಸ್ಟ್ ಕಾರ್ಯ ಚಟುವಟಿಕೆಗಳಿಗೆ ಸುದರ್ಶನ್ ಮತ್ತು ದಿವಂಗತ ತಮ್ಮ ತಂದೆ ಮುನಿನಾರಾಯಣಪ್ಪ ಅವರ ಪ್ರಯತ್ನವನ್ನು ಮೆಲುಕುಹಾಕಿ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗೋಣ ಎಂದರು.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ತಾಯಿ ಕಸ್ತೂರಿ ಗಾಂಧಿ ಎಂಬ ಸಿನಿಮ ಪ್ರದರ್ಶನ, ನಂತರದಲ್ಲಿ ಸಿ.ಜಿ. ಕೃಷ್ಣಸ್ವಾಮಿ ನಿರ್ದೇಶನದ ಕಾಲಜ್ಞಾನಿ ಕನಕ ಎಂಬ ನಾಟಕೋತ್ಸವ ಪ್ರದರ್ಶನಗೊಂಡಿತು.


ಟ್ರಸ್ಟ್ ಸಂಸ್ಥಾಪಕರಾದ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜಯ್ಯ, ಸಾಹಿತಿ ಚಂದ್ರಶೇಖರನಂಗಲಿ, ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಕಸಾಪ ಅಧ್ಯಕ್ಷ ಗೋಪಾಲಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರ್, ಟ್ರಸ್ಟ್ ಅಧ್ಯಕ್ಷ ಎಂ.ಆರ್.ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ನಾಗನಾಳ ಮಂಜುನಾಥ್, ಉಪಾಧ್ಯಕ್ಷೆ ಭಾರತಿದೇವಿ, ಖಜಾಂಚಿ ಅಪ್ಪಯ್ಯಶೆಟ್ಟಿ, ಲೆಕ್ಕಪರಿಶೋಧಕ ಎಸ್.ಕೆ.ವೆಂಕಟರಾಂ, ಸಂಘಟನಾ ಕಾರ್ಯದರ್ಶಿ ಕೆ.ರವಿ, ಮಾಜಿ ಅಧ್ಯಕ್ಷ ರಾಧಾಕೃಷ್ಣ, ನಿರ್ದೇಶಕರಾದ ವಿ.ಆರ್.ನಾಗರಾಜ್, ವೀರಭದ್ರಪ್ಪ, ಅರುಣ್, ಅರ್ಜುನ್, ವ್ಯವಸ್ಥಾಪಕ ಸುನೀಲ್‌ಮ ಮತ್ತಿತರರಿದ್ದರು.