
ಬೆಂಗಳೂರು,ಆ.೩೧:ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ವಿರೋಧಿಸಿ ಧರ್ಮಸ್ಥಳ ಪ್ರಕರಣದ ಎನ್‌ಐಎ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಪ್ರತ್ಯೇಕ ಹೋರಾಟ ನಡೆಸಿದ್ದು, ಜೆಡಿಎಸ್ ಇಂದು ಧರ್ಮಸ್ಥಳಕ್ಕೆ ಸತ್ಯಯಾತ್ರೆ ನಡೆಸಿದ್ದರೆ, ನಾಳೆ ಬಿಜೆಪಿ ಧರ್ಮಸ್ಥಳ ಚಲೋ ಹಾಗೂ ಧರ್ಮ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಸಮಾವೇಶದಲ್ಲಿ ಜೆಡಿಎಸ್ ಸಹ ಭಾಗಿಯಾಗಲಿದೆ.
ಹಾಸನದಿಂದ ಸತ್ಯಯಾತ್ರೆ
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹಾಸನದಿಂದ ಜೆಡಿಎಸ್‌ನ ಸತ್ಯಯಾತ್ರೆ ಆರಂಭವಾಗಿದೆ. ಈ ಸತ್ಯಯಾತ್ರೆಯಲ್ಲಿ ಜೆಡಿಎಸ್‌ನ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದು, ಹಾಸನದ ಯಗಚಿ ಬಳಿ ಇರುವ ಕಂದಲಿಯಿಂದ ನೂರಾರು ವಾಹನಗಳಲ್ಲಿ ಈ ಸತ್ಯಯಾತ್ರೆ ಆರಂಭವಾಯಿತು, ಜೆಡಿಎಸ್ ಯುವಘಟಕದ ಶಾಸಕರು,ಮುಖಂಡರುಗಳು ಬಸ್‌ನಲ್ಲಿ ಯಾತ್ರೆ ನಡೆಸಿದರು. ಮಧ್ಯಾಹ್ನ ನೇತ್ರಾವತಿ ನದಿ ಬಳಿ ಎಲ್ಲರೂ ಸಮಾವೇಗೊಂಡು ಅಲ್ಲಿಂದು ೧ ಕಿ.ಮೀ ಪಾದಯಾತ್ರೆ ಮೂಲಕ ಧರ್ಮಸ್ಥಳ ತಲುಪಿದರು.
ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿಯ ದರ್ಶನ ಪಡೆದು ನಂತರ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರನ್ನು ಜೆಡಿಎಸ್‌ನ ಶಾಸಕರುಗಳು ಹಾಗೂ ನಾಯಕರುಗಳು ಭೇಟಿ ಮಾಡಿದರು.
ನಾಳೆ ಬಿಜೆಪಿ ಧರ್ಮಸ್ಥಳ ಚಲೋ ಸಮಾವೇಶ
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ವಿರೋಧಿಸಿ ಹಾಗೂ ಧರ್ಮಸ್ಥಳ ಪ್ರಕರಣವನ್ನು ಎನ್‌ಐಟಿ ತನಿಖೆಗೆ ಆಗ್ರಹಿಸಿ ಬಿಜೆಪಿ ಧರ್ಮಸ್ಥಳ
ಚಲೋ ಹಾಗೂ ಬೃಹತ್ ಸಮಾವೇಶವನ್ನು ಧರ್ಮಸ್ಥಳದಲ್ಲಿ ನಡೆಸುತ್ತಿದೆ. ರಾಜ್ಯಾದ್ಯಂತ ವಿವಿಧೆಡೆಯಿಂದ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಧರ್ಮಸ್ಥಳ ಚಲೋದಲ್ಲಿ ಭಾಗಿಯಾಗಲಿದ್ದು,ನಾಳೆ ಮಧ್ಯಾಹ್ನ ಧರ್ಮಸ್ಥಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ನಡೆಸಲಿದೆ.
ಬಿಜೆಪಿಯ ಈ ಸಮಾವೇಶದಲ್ಲಿ ೧ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದ್ದು, ಬಿಜೆಪಿಯ ಎಲ್ಲ ಸಂಸದರು, ಶಾಸಕರು, ಮುಖಂಡರುಗಳು ಈ ಸಮಾವೇಶದಲ್ಲಿ ಭಾಗಿಯಾಗುವರು.