
ಟೆಹರಾನ್, ಫೆ. ೨೮- ಪರಮಾಣು ಶಸ್ತ್ರಾಸ್ತ್ರ್ತ್ರಗಳ ಒಪ್ಪಂದಕ್ಕೆ ಅಂಕಿತ ಹಾಕಲು ಮೊಂಡಾಟ ಮಾಡಿದ ಇರಾನ್‌ಗೆ ತಕ್ಕಶಾಸ್ತಿ ಮಾಡಲು ಇಸ್ರೇಲ್ ಮತ್ತು ಅಮೆರಿಕ, ಇರಾನ್ ರಾಜಧಾನಿ ಟೆಹರಾನ್‌ನಿನ ೩೦ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ.
ಈ ಕ್ಷಿಪಣಿ ದಾಳಿಯಿಂದಾಗಿ ಯುದ್ಧ ಕಾರ್ಮೋಡ ಕವಿದಿದ್ದು, ಇರಾನ್‌ನ ಗುಪ್ತಚರ ಕಚೇರಿ ಸೇರಿದಂತೆ ೩೦ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಲಾಗಿದೆ.
ಟೆಹರಾನ್‌ನಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟದ ಶಬ್ಧಗಳು ಕೇಳಿಸಿದ್ದು, ಬಾನೆತ್ತರಕ್ಕೆ ದಟ್ಟವಾದ ಹೊಗೆ ಆವರಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿಯೂ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ ಎಂದು ಇರಾನ್ ಸುದ್ದಿ ಸಂಸ್ಥೆ ಫಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಹಲವಾರು ಕ್ಷಿಪಣಿಗಳು ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಜೊಮ್ಹೌರಿ ಪ್ರದೇಶಗಳಲ್ಲಿ ಬಿದ್ದಿವೆ. ಕೇಂದ್ರ ಟೆಹ್ರಾನ್‌ನಲ್ಲಿ ಕನಿಷ್ಠ ಮೂರು ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ರಾಜ್ಯ ಮಾಧ್ಯಮ ದೃಢಪಡಿಸಿದೆ.
ಆದರೂ ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ಇರಾನಿನ ಅಧಿಕಾರಿಗಳು ವಿವರಗಳನ್ನು ಬಿಡುಗಡೆ ಮಾಡಿಲ್ಲ.
ದೇಶದ ವಿರುದ್ಧ ಸನ್ನಿಹಿತ ಬೆದರಿಕೆಗಳನ್ನು ಎದುರಿಸಲು ಈ ದಾಳಿಯನ್ನು ನಡೆಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದಾರೆ.
ಸದ್ಯದ ಪರಿಸ್ಥಿತಿ ಪ್ರಾದೇಶಿಕ ಯುದ್ಧದತ್ತ ಸಾಗುತ್ತಿರುವಂತೆ ಕಂಡುಬರುತ್ತಿರುವುದರಿಂದ, ಜಗತ್ತು ಈಗ ಇರಾನ್‌ನ ಸಂಭಾವ್ಯ ಪ್ರತಿಕ್ರಿಯೆಯನ್ನು ಗಮನಿಸುತ್ತಿದೆ
ಇರಾನ್ ಮೇಲೆ ಕ್ಷಿಪಣಿ ದಾಳಿ ಆರಂಭಿಸಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಘೋಷಿಸಿದ್ದಾರೆ.
ಇಸ್ರೇಲ್‌ಗೆ ಬೆದರಿಕೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇರಾನ್ ಮೇಲೆ ದಾಳಿ ಮಾಡಲಾಗಿದೆ. ಈ ಕ್ಷಿಪಣಿ ದಾಳಿ ಆರಂಭಿಸುವ ಮುನ್ನ ಇಸ್ರೇಲ್ ನಲ್ಲಿ ಸೈರನ್ ಮೊಳಗಿತು. ದೇಶದ ನಾಗರಿಕರು ಬಾಂಬ್ ಶೆಲ್ಟರ್ ಗಳ ಬಳಿಯಿರುವಂತೆ ಅನಗತ್ಯವಾಗಿ ಓಡಾಡದಂತೆ ಇಸ್ರೇಲ್ ಸೇನಾಧಿಕಾರಿ ನಾಗರಿಕರಿಗೆ ಸೂಚನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ರಾಜಧಾನಿ ಟೆಲ್ ಅವೀವ್‌ನಿಂದ ದೆಹಲಿಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದ ಏರ್ ಇಂಡಿಯಾ ವಿಮಾನ ೧೪೦ ಏರಲು ಸಜ್ಜಾಗುತ್ತಿದ್ದ ಪ್ರಯಾಣಿಕರು ತಮ್ಮ ವಸ್ತುಗಳನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಬಾಂಬ್ ಶೆಲ್ಟರ್ ಗಳಿಗೆ ದೌಡಾಯಿಸಿದ್ದಾರೆ.
ಭಾರತ ಮೂಲದ ವಿಮಾನಯಾನ ಸಂಸ್ಥೆಯನ್ನು ಅವಲೋಕಿಸಿ ಒಂದು ವಾರ ವಿಮಾನ ಹಾರಾಟವನ್ನು ಸ್ಥಗಿತಗೊಳುಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ತನ್ನ ವಾಯುಪ್ರದೇಶವನ್ನು ಸಹ ಮುಚ್ಚಿದೆ. ವಿಮಾನಯಾನ ಸಂಸ್ಥೆಗಳು ಇಸ್ರೇಲ್ ಪ್ರದೇಶವನ್ನು ಪ್ರವೇಶಿಸದಂತೆ ಎಚ್ಚರಿಕೆ ನೀಡಲಾಗಿದೆ.
ಮುನ್ಮೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಡುತ್ತವೆ, ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ ಮತ್ತು ಜನರು ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
೨೦೨೫ರ ಜೂನ್ ನಲ್ಲಿ ೧೨ ದಿನಗಳ ಕಾಲ ನಡೆದ ಇರಾನ್- ಇಸ್ರೇಲ್ ಮಹಾಯುದ್ಧದ ಬಳಿಕ ಈ ಕ್ಷಿಪಣಿ ದಾಳಿ ನಡೆದಿದೆ. ಇರಾನ್ ತನ್ನ ಅಣು ಮತ್ತು ಖಂಡಾಂತರ ಕ್ಷಿಪಣಿ ಕಾರ್ಯಕ್ರಮ ಮುಂದುವರಿಸಿದರೆ, ದಾಳಿ ನಡೆಸುವುದಾಗಿ ಅಮೆರಿಕ ಮತ್ತು ಇಸ್ರೇಲ್ ಎಚ್ಚರಿಕೆ ನೀಡಿದ್ದವು. ಇದರ ಬೆನ್ನಲ್ಲೇ ಅಮೆರಿಕ ಮತ್ತು ಇಸ್ರೇಲ್‌ನಿಂದ ಕ್ಷಿಪಣಿ ದಾಳಿ ಆರಂಭಿಸಿದೆ.
ದಾಳಿ ದಿನಾಂಕವನ್ನು ಕೇಲವು ವಾರಗಳ ಹಿಂದೆಯೇ ನಿಗದಿಪಡಿಸಿತ್ತು. ಅಮೆರಿಕ ಮತ್ತು ಇರಾನ್ ನಡುವಿನ ಹಲವು ವರ್ಷಗಳ ವಿವಾದವನ್ನು ರಾಜತಾಂತ್ರಿಕವಾಗಿ ಬಗೆಹರಿಸಿಕೊಳ್ಳಲು ಮಾತುಕತೆ ಪುನರಾರಂಭಿಸಿತ್ತು.






























