
ಔರಾದ್ :ಅ.25: ನಮ್ಮ ಇಚ್ಚೆಗಳನ್ನು ಈಡೇರಿಸುವುದೇ ಇಷ್ಟಲಿಂಗ ದೀಕ್ಷೆಯಾಗಿದೆ. ನಂಬಿದ ಹೆಂಡತಿಗೆ ಗಂಡನೊಬ್ಬ, ನಂಬಬಲ್ಲ ಭಕ್ತನಿಗೆ ದೇವನೊಬ್ಬ, ಬೇಡ ಬೇಡ ಅನ್ನೊ ದೈವದ ಸಂಗತಿ ಬೇಡ ಅನ್ನುವಂತೆ ಎಲ್ಲರು ಎಕದೇವೋಪಾಸನೆ ಮಾಡಬೇಕು ಎಂದು ನಾಡೋಜ ಡಾ.ಬಸವಲಿಂಗ ಪಟ್ಟದೇವರು ತಿಳಿಸಿದರು.
ಶುಕ್ರವಾರ ನಿಡೋದಾ ಗ್ರಾಮದ ಬಸವ ಮಂಟಪದಲ್ಲಿ ಸ್ಥಳಿಯ ರಾಷ್ಟ್ರೀಯ ಬಸವ ದಳದ ವತಿಯಿಂದ ಏರ್ಪಡಿಸಿದ ಇಷ್ಟಲಿಂಗ ದೀಕ್ಷೆ ಹಾಗೂ ಮನೆಗೊಂದು ಬಸವಜ್ಯೋತಿ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯವಹಿಸಿ ಆರ್ಶೀವಚನ ನೀಡಿ, ಮಾತನಾಡಿದ ಅವರು, ಭೂಮಿಯ ಮೇಲಿನ ಜೀವಿಗಳು ಒಂದೇ ದೈವದ ಮೇಲೆ ನಿಷ್ಠೆಯಾಗಿರಬೇಕು. ಸಾಧನೆಯ ಮೊದಲ ಮೆಟ್ಟಿಲು ಧರ್ಮ ಸಂಸ್ಕಾರವಾಗಿದೆ. ಲಿಂಗಾಯತ ಧರ್ಮದ ಪ್ರಮುಖ ಸಂಸ್ಕಾರವೇ ಇಷ್ಟಲಿಂಗ ದೀಕ್ಷೆಯಾಗಿದೆ. ಬಸವ ಧರ್ಮದಲ್ಲಿ ಪ್ರತಿಯೊಬ್ಬರು ದೀಕ್ಷೆಯನ್ನು ಪಡೆದುಕೊಂಡು ಗುರುಪುತ್ರರಾಗಬೇಕು. ಲಿಂಗ ಧಾರಣೆ ನಿಶ್ಚಯ ಕಾರ್ಯದಂತಿದ್ದರೇ , ಲಿಂಗದೀಕ್ಷೆಯೂ ಲಗ್ನ ಕಾರ್ಯವಿದ್ದಂತೆ, ಆದ್ದರಿಂದ ಪ್ರತಿಯೊಬ್ಬರು ದೀಕ್ಷೆಯೆಂಬ ಆಧ್ಯಾತ್ಮಿಕ ಲಗ್ನವನ್ನು ಮಾಡಿಕೊಂಡು ಲಿಂಗಪತಿಯಾದಡೆ , ಶರಣ ಸತಿಯಾಗಿ ಲಿಂಗ ಭೋಗೋಪಭೋಗವೆಂಬ ಸಂಸಾರವನ್ನು ಮಾಡಿ ದೇವರನ್ನು ಸೇರಬೇಕು ಎಂದು ತಿಳಿಸಿದರು.
ಕೂಡಲ ಸಂಗಮ ಬಸವ ಧರ್ಮ ಪೀಠ ದ್ವೀತಿಯ ಮಹಿಳಾ ಜಗದ್ಗುರು ನಿರಂಜನ ಮಹಾ ಜಗದ್ಗುರು ಮಾತೆ ಗಂಗಾದೇವಿ ಮಾತನಾಡಿ, ಹುಟ್ಟುವುದು-ಸಾಯುವುದು ಸಹಜವಾಗಿದೆ. ಸಂಸಾರ ಸಾಗರದಲ್ಲಿ ಪಾಪ-ಪುಣ್ಯಗಳೆಂಬ ಎರಡು ವಿಧದ ಕಾರ್ಯ ಸಾಧನಗಳಿವೆ. ಅಂಬಿಗನಂತೆ ಗುರುವು ತನ್ನ ಶಿಷ್ಯರಿಗೆ ಅನುಗ್ರಹದ ಕೈನೀಡಿ , ಇಷ್ಟಲಿಂಗವೆಂಬ ದೋಣಿಯಲ್ಲಿ ಕುಳ್ಳರಿಸಿಕೊಂಡು ಮುಕ್ತಿಯ ದಡಕ್ಕೆ ಮುಟ್ಟಿಸುತ್ತಾನೆ. ಹೀಗೆ ಜೀವನದ ಗುರಿಯನ್ನು ತೋರಿಸಿದಾತನೇ ನಿಜವಾದ ಗುರುಗಳಾಗುತ್ತಾರೆ ಎಂದು ಕಿವಿ ಮಾತು ಹೇಳಿದರು.
ಈ ಸಂಧರ್ಭದಲ್ಲಿ 108 ಜನರಿಗೆ ಲಿಂಗ ದೀಕ್ಷೆ ನೀಡಲಾಯಿತು. ಒಂದು ತಿಂಗಳ ಕಾಲ ಪ್ರವಚನಮಾಡಿದ ಸುರೇಖಾ ಶಿವಶರಣಪ್ಪಾ ವಲ್ಲೆಪೂರೆ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಭಾಲ್ಕಿ ವಿಭಾಗದ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಜಿಲ್ಲಾ ಬಸವ ಬಳಗದ ಅಧ್ಯಕ್ಷ ಡಾ.ಸಂಜುಕುಮಾರ ಜುಮ್ಮಾ, ರಘುನಾಥರಾವ ರೋಟ್ಟೆ, ರಂಗಮ್ಮಾ ಜೀರ್ಗೆ , ಬಾಬುರಾವ ಜಿರ್ಗೆ, ಮಹೇಶ ಪಾಟೀಲ, ನಾಗರಾಜ ಬಿರಾದಾರ,ಧನರಾಜ್ ಕ್ಯಾದಪ್ಪ, ಪವನ್, ನವನ್ನಾಥ ತಡಕಲೆ. ದತ್ತಾತ್ರಿ, ಲಕ್ಷ್ಮಣರಾವ್, ಪಿಂಟು ಬಿರಾದರ್, ವಿರೇಶ, ನಾಗನ್ನಾಥರಾವ್, ಸಿದ್ದಪ್ಪ, ತಾನಾಜಿ, ಪ್ರಭುರಾವ್, ಹಾವಗಿರಾವ್, ವೈಜಿನ್ನಾಥ ನಾಗೂರೆ ಇದ್ದರು.