Home ಮುಖಪುಟ ಸುದ್ದಿ ಅಮೆರಿಕ ದಾಳಿಗೆ ಇರಾನಿನ ಅತೀ ದೊಡ್ಡ ಸೇತುವೆ ಧ್ವಂಸ

ಅಮೆರಿಕ ದಾಳಿಗೆ ಇರಾನಿನ ಅತೀ ದೊಡ್ಡ ಸೇತುವೆ ಧ್ವಂಸ

೮ ಮಂದಿ ಸಾವು
ಟೆಹ್ರಾನ್, ಏ,೩- ಇರಾನ್‌ನ ಅತಿ ದೊಡ್ಡ ಸೇತುವೆ ಮೇಲೆ ಅಮೆರಿಕ ದಾಳಿ ನಡೆಸಿ ನಾಶಪಡಿಸಿದ್ದು ಈ ದಾಳಿಯಲ್ಲಿ ೮ ಮಂದಿ ಸಾವನ್ನಪ್ಪಿದ್ದು ೯೫ ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಮಧ್ಯಪ್ರಾಚ್ಯ ಪ್ರದೇಶದಾದ್ಯಂತ ಎಂಟು ಪ್ರಮುಖ ಸೇತುವೆಗಳ ಪಟ್ಟಿಯನ್ನು ಇರಾನ್ ಬಿಡುಗಡೆ ಮಾಡಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಗುಡುಗಿದೆ.

ಇರಾನ್ ಅನ್ನು “ಶಿಲಾಯುಗಕ್ಕೆ ಹಿಂತಿರುಗಿ” ಕಳುಹಿಸುತ್ತೇವೆ, ಮುಂದಿನ ಎರಡು ಮೂರು ವಾರಗಳಲ್ಲಿ ಮತ್ತಷ್ಟು ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕ ಹಾಕಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಅದಕ್ಕೆ ಪ್ರತೀಕಾರವಾಗಿ ಇರಾನ್‌ನ ೮ ಗಲ್ಫ್ ಸೇತುವೆ ಪಟ್ಟಿ ಬಿಡುಗಡೆ ಮಾಡಿ ದಾಳಿ ನಡೆಸುವ ಬೆದರಿಕೆ ಹಾಕಿದೆ

ಇರಾನಿನ ಪಟ್ಟಿಯಲ್ಲಿ ಕುವೈತ್‌ನಲ್ಲಿರುವ ಶೇಖ್ ಜಾಬರ್ ಅಲ್-ಅಹ್ಮದ್ ಅಲ್-ಸಬಾ ಸಮುದ್ರ ಸೇತುವೆ, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿರುವ ಶೇಖ್ ಜಾಯೆದ್ ಸೇತುವೆ, ಅಲ್ ಮಕ್ತಾ ಸೇತುವೆ ಮತ್ತು ಶೇಖ್ ಖಲೀಫಾ ಸೇತುವೆ, ಸೌದಿ ಅರೇಬಿಯಾ ಬಹ್ರೇನ್‌ಗೆ ಸಂಪರ್ಕಿಸುವ ಕಿಂಗ್ ಫಹದ್ ಕಾಸ್‌ವೇ ಸೇರಿವೆ. ಇದರ ಜೊತೆಗೆ ಜೋರ್ಡಾನ್‌ನಲ್ಲಿರುವ ಕಿಂಗ್ ಹುಸೇನ್ ಸೇತುವೆ, ಡಾಮಿಯಾ ಸೇತುವೆ ಮತ್ತು ಅಬ್ದೌನ್ ಸೇತುವೆ ಕೂಡ ಸೇರಿದ ಎನ್ನಲಾಗಿದೆ.


ಉತ್ತರ ನಗರದ ಕರಾಜ್‌ನಲ್ಲಿ ಪ್ರಮುಖ ಮೂಲಸೌಕರ್ಯಗಳ ಮೇಲೆ ಅಮೆರಿಕ-ಇಸ್ರೇಲಿ ದಾಳಿಯ ನಂತರ ದಾಳಿಗೆ ಪ್ರತಿದಾಳಿಯ ಪ್ರತೀಕಾರದ ಬಗ್ಗೆ ಸುಳಿವು ನೀಡಿದೆ ಇರಾನ್‌ನ ಅತಿ ಎತ್ತರದ ಬಿ೧ ಸೇತುವೆಯ ಮೇಲೆ ಎರಡು ದಾಳಿಗಳು ಸಂಭವಿಸಿದ ನಂತರ ಗಲ್ಫ್ ರಾಷ್ಟ್ರಗಳು ಮತ್ತು ಜೋರ್ಡಾನ್‌ನಲ್ಲಿರುವ ಹಲವಾರು ಪ್ರಮುಖ ಸೇತುವೆಗಳು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಸಂಭಾವ್ಯ ಗುರಿಯಾಗಬಹುದು ಎಂದು ಎಚ್ಚರಿಸಲಾಗಿದೆ.


ಅಮೆರಿಕ-ಇಸ್ರೇಲಿ ದಾಳಿಗಳು ಮಧ್ಯಪ್ರಾಚ್ಯದ ಅತಿ ಎತ್ತರದ ಸೇತುವೆಯನ್ನು ಭಾಗಶಃ ನಾಶಪಡಿಸಿವೆ, ಈ ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದು ೧೩೬ ಮೀಟರ್ ಎತ್ತರದ ಬಿ ೧ ಸೇತುವೆ ಇನ್ನೂ ನಿರ್ಮಾಣ ಹಂತದಲ್ಲಿದೆ ಮತ್ತು ಟೆಹ್ರಾನ್ ಅನ್ನು ಪಶ್ಚಿಮ ನಗರವಾದ ಕರಾಜ್‌ಗೆ ಸಂಪರ್ಕಿಸುತ್ತಿತ್ತು ಅದರ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದೆ.


ಬಿ ೧ ಸೇತುವೆ ಇರುವ ಅಲ್ಬೋರ್ಜ್ ಪ್ರಾಂತ್ಯದ ಉಪ ಗವರ್ನರ್ ಗೋದ್ರಾತೊಲ್ಲಾ ಸೀಫ್ ಪ್ರತಿಕ್ರಿಯಿಸಿ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ೯೫ ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.


ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ವೀಡಿಯೊಗಳು ದಾಳಿ ನಂತರ ಸೇತುವೆಯ ಪ್ರಮುಖ ಭಾಗಗಳು ಕುಸಿಯುತ್ತಿರುವುದನ್ನು ತೋರಿಸಿವೆ. ಡೊನಾಲ್ಡ್ ಟ್ರಂಪ್ ಟೆಹ್ರಾನ್‌ನಿಂದ ೩೫ ಕಿಲೋಮೀಟರ್ ನೈಋತ್ಯದಲ್ಲಿರುವ ಬಿ ೧ ಸೇತುವೆಯಿಂದ ಹೊಗೆ ಏರುತ್ತಿರುವ ದೃಶ್ಯಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಐದು ವಾರಗಳ ಯುದ್ಧ ಕೊನೆಗೊಳಿಸಲು ಇರಾನ್‌ಗೆ ನೀಡುತ್ತಿರುವ ಎಚ್ಚರಿಕೆ ಸಂದೇಶ ಎಂದಿದ್ದಾರೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಪ್ರತಿಕ್ರಿಯಿಸಿ “ಪೂರ್ಣಗೊಂಡ ಸೇತುವೆಗಳು ಸೇರಿದಂತೆ ನಾಗರಿಕ ರಚನೆಗಳನ್ನು ಹೊಡೆದುರುಳಿಸುವುದು ಇರಾನಿಯನ್ನರನ್ನು ಶರಣಾಗುವಂತೆ ಒತ್ತಾಯಿಸುವುದಿಲ್ಲ.” ಬದಲಾಗಿ ಮತ್ತಷ್ಟು ಪ್ರತೀಕಾರ ತೀರಿಸಿಕೊಳ್ಳಲು ಪ್ರೇರೇಪಿಸುತ್ತಿದೆ. ಅಮೆರಿಕಾಕ್ಕೆ ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲೆ ಎಂದಿದ್ದಾರೆ
ಈವರೆಗೆ ೧೩೪೦ ಸಾವು

ಫೆಬ್ರವರಿ ೨೮ ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿ ದಾಳಿ ನಡೆಸಿ, ಅಂದಿನ ಸುಪ್ರೀಂ ನಾಯಕ ಅಲಿ ಖಮೇನಿ ಸೇರಿದಂತೆ ಇಲ್ಲಿಯವರೆಗೆ ೧,೩೪೦ ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಗಿದೆ.

ಯುದ್ದದಿಂದ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಾಗಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕದ ಮಿಲಿಟರಿ ಸ್ವತ್ತುಗಳನ್ನು ಆಶ್ರಯಿಸುತ್ತಿರುವ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.