Home Lead News ಅಮೆರಿಕಕ್ಕೆ ಇರಾನ್ ಸಡ್ಡು

ಅಮೆರಿಕಕ್ಕೆ ಇರಾನ್ ಸಡ್ಡು

ವಾಷಿಂಗ್ಟನ್,ಏ.೬- ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ೪೮ ಗಂಟೆಯೊಳಗೆ ಹಾರ್ಮುಜ್ ಜಲಸಂಧಿ ಮುಕ್ತಗೊಳಿಸದಿದ್ದರೆ ಇರಾನ್‌ನ ಇಂಧನ ಮತ್ತು ಪರಮಾಣು ಮೂಲ ಸೌಕರ್ಯದ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಬೆನ್ನಲ್ಲೇ, ತಮ್ಮ ತಂಟೆಗೆ ಬಂದರೆ ಮತ್ತೊಂದು ಪ್ರಮುಖ ಜಲಮಾರ್ಗ “ಬಾಬ್ ಅಲ್-ಮಂದೇಬ್” ಅನ್ನು ಮುಚ್ಚಲು ಹಿಂಜರಿಯುವುದಿಲ್ಲ ಎಂದು ಇರಾನ್ ತಿರುಗೇಟು ನೀಡಿದೆ.


ಬಾಬ್ ಅಲ್-ಮಂದೇಬ್ ಜಲಮಾರ್ಗ, ಕೆಂಪು ಸಮುದ್ರವನ್ನು ಅಡೆನ್ ಕೊಲ್ಲಿಗೆ ಸಂಪರ್ಕಿಸುವ ಪ್ರಮುಖ ಜಾಗತಿಕ ಹಡಗು ಸಾಗಣೆ ಚಾಕ್‌ಪಾಯಿಂಟ್ ಆಗಿದ್ದು, ಲಕ್ಷಾಂತರ ಬ್ಯಾರೆಲ್‌ಗಳ ತೈಲ ಮತ್ತು ಪ್ರಮುಖ ಸರಕುಗಳು ಪ್ರತಿದಿನ ಸಾಗಣೆಯಾಗುವ ತಾಣವಾಗಿದೆ.


ಈಗ ಈ ಜಲಸಂಧಿಯನ್ನು ಇರಾನ್ ಮುಚ್ಚುವುದಾಗಿ ಬೆದರಿಕೆ ಹಾಕಿದ್ದು, ಒಂದು ವೇಳೆ ಮುಚ್ಚಿದರೆ ಜಾಗತಿಕವಾಗಿ ಕಚ್ಚಾತೈಲ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನಲಾಗಿದೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೂರ್ಖತನದ ತಪ್ಪುಗಳಿಗೆ ಮುಂದಿನ ದಿನಗಳಲ್ಲಿ ಬಾರಿ ಬೆಲೆ ತೆರಬೇಕಾಗುತ್ತದೆ. ಇರಾನ್ ಮೇಲೆ ಮತ್ತೊಮ್ಮೆ ಬೆದರಿಕೆ ಹಾಕಿದರೆ ಮತ್ತೊಂದು ಪ್ರಮುಖ ಜಲಮಾರ್ಗ “ಬಾಬ್ ಅಲ್-ಮಂದೇಬ್” ಮುಚ್ಚಬೇಕಾಗುತ್ತದೆ ಎಂದು ಇರಾನ್ ನೇರವಾಗಿಯೇ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.


ಈ ಕುರಿತು ಮಾಹಿತಿ ನೀಡಿರುವ ಇರಾನ್ ಸುಪ್ರೀಂ ನಾಯಕ ಮೊಜ್ತಾಬಾ ಖಮೇನಿ ಅವರ ಇರಾನಿನ ಸಲಹೆಗಾರ ಈ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ಜಗತ್ತಿನ ಪ್ರಮುಖ ಕಚ್ಚಾತೈಲ ಪೂರೈಕೆಯಲ್ಲಿ ಬಾರಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಜಲಮಾರ್ಗ ಮುಚ್ಚಲು ಹಿಂಜರಿಯುವುದಿಲ್ಲ ಎಂದು ಅಮೆರಿಕಕ್ಕೆ ನೇರವಾಗಿಯೇ ಇರಾನ್ ಎಚ್ಚರಿಕೆ ನೀಡಿದ್ದು ಅಮೆರಿಕ ಯಾವ ನಿಲುವು ತೆಗೆದುಕೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯನ್ನು ೪೮ ಗಂಟೆಗಳ ಒಳಗೆ ತೆರೆಯಬೇಕು ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತಿದೆ. ಜಾಗತಿಕ ಮಾರುಕಟ್ಟೆಗಳು ಮತ್ತಷ್ಟು ಪೂರೈಕೆ ಅಡಚಣೆಗಳಿಗೆ ಸಿದ್ಧವಾಗುತ್ತಿರುವಾಗ ಇರಾನ್‌ನಿಂದ ಬೆದರಿಕೆ ಬಂದಿದೆ.


ಫೆಬ್ರವರಿ ೨೮ ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ನಡೆಸುವ ಮೂಲಕ ಇರಾನ್ ಸರ್ವೋಚ್ಚ ನಾಯಕ ಆಯಾತೊಲ್ಲ ಆಲಿ ಖಮೇನಿ ಸೇರಿದಂತೆ ಅವರ ಕುಟುಂಬದ ಸದಸ್ಯರು ಮತ್ತು ಇರಾನ್ ಸರ್ಕಾರದ ಪ್ರಮುಖರನ್ನು ಹತ್ಯೆ ಮಾಡಿತ್ತು. ಇದರ ಬೆನ್ನಲ್ಲೇ ದಿನದಿಂದ ದಿನಕ್ಕೆ ಯುದ್ಧ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ನಷ್ಟ ಪರಿಹಾರವಿಲ್ಲದೆ ಹಾರ್ಮುಜ್ ತೆರೆಯಲ್ಲ


ವಿಶ್ವದ ದೊಡ್ಡಣ್ಣ ಟ್ರಂಪ್ ಡೆಡ್‌ಲೈನ್‌ಗೆ ಇರಾನ್ ಕೂಡ ತನ್ನದೇ ದಾಟಿಯಲ್ಲಿ ಕೌಂಟರ್ ನೀಡಿದೆ. ಯುದ್ಧದಿಂದಾಗಿರುವ ನಷ್ಟ ಪರಿಹಾರವಿಲ್ಲದೇ ಹಾರ್ಮುಜ್ ಜಲಸಂಧಿ ತೆರೆಯುವ ಮಾತಿಲ್ಲ ಎಂದು ಅಮೆರಿಕಗೆ ಇರಾನ್ ಹೊಸ ಷರತ್ತು ಹಾಕಿದೆ.


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಹೊಸ ಬೆದರಿಕೆ ಹಾಕಿದ್ದು, ಒಪ್ಪಂದಕ್ಕೆ ಬನ್ನಿ ಅಥವಾ ಶರಣಾಗಿ. ಇಲ್ಲವಾದಲ್ಲಿ ಇಂದು ರಾತ್ರಿ ೮ ಗಂಟೆಗೆ ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಇರಾನ್ ಹಿಂದೆ ಸರಿಯಲು ಸಿದ್ಧವಿಲ್ಲ. ಯುದ್ಧದಿಂದಾಗಿರುವ ನಷ್ಟ ತುಂಬಿಕೊಡುವಂತೆ ಷರತ್ತು ವಿಧಿಸುವ ಮೂಲಕ ಟ್ರಂಪ್ ನರಕ ದರ್ಶನದ ಎಚ್ಚರಿಕೆಗೆ ಇರಾನ್ ಪ್ರತ್ಯುತ್ತರ ನೀಡಿದೆ.


ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ೪೮ ಗಂಟೆಗಳ ಹೊಸ ಗಡುವು ನೀಡಿದ್ದು, ಮಂಗಳವಾರ ಮುಗಿಯಲಿದೆ. ಈ ನಡುವೆ ಹುಚ್ಚರೇ, ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ನೀವು ನರಕಕ್ಕೆ ಹೋಗುತ್ತೀರಿ ಎಂದು ಕಟು ಪದಗಳಲ್ಲಿ ಇರಾನ್ ನಾಯಕರನ್ನು ಟ್ರಂಪ್ ಎಚ್ಚರಿಸಿದ್ದಾರೆ. ಅಲ್ಲದೇ ಇಂದು ಟ್ರಂಪ್ ಸಾರ್ವಜನಿಕ ಭಾಷಣ ಮಾಡಲಿದ್ದು, ಇರಾನ್‌ಗೆ ಕಡೆಯ ಎಚ್ಚರಿಕೆ ನೀಡುವ ಸಾಧ್ಯತೆ ಇದೆ.


ಭಾನುವಾರ ಟ್ರೂಥ್ ಸೋಶಿಯಲ್ ಪೋಸ್ಟ್ ಮಾಡಿರುವ ಟ್ರಂಪ್, ಟೆಹ್ರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ, ಅಮೆರಿಕವು ಅದರ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ಮಾಡಬಹುದು ಮತ್ತು ಅದು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.


ಈ ಎಚ್ಚರಿಕೆಗಳ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಕಾಲಮಾನದ ಪ್ರಕಾರ ಮಧ್ಯಾಹ್ನ ೧ ಗಂಟೆಗೆ ಎಫ್ -೧೫ ಇ ಸಿಬ್ಬಂದಿಯನ್ನು ರಕ್ಷಿಸುವ ಕುರಿತು ಮಾತನಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಹಾರ್ಮುಜ್ ಜಲಸಂಧಿ ನಿಯಂತ್ರಣ ಹಾಗೂ ಕದನ ವಿರಾಮದ ನಂತರದ ದಾಳಿಯ ಬಗ್ಗೆ ಸುಳಿವು ನೀಡಲಿದ್ದಾರೆ.


ಮುಂದುವರಿದ ದಾಳಿ-ಪ್ರತಿದಾಳಿ:


ಈ ಮಧ್ಯೆ, ದಕ್ಷಿಣ ಇಸ್ರೇಲ್‌ನ ಡಿಮೋನಾ ಪ್ರದೇಶದ ಬಳಿಯ ಪೆಟ್ರೋಕೆಮಿಕಲ್ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ. ಡಿಮೋನಾ ಇಸ್ರೇಲ್‌ನ ಪ್ರಮುಖ ಪರಮಾಣು ಸೌಲಭ್ಯದ ಸ್ಥಳವಾಗಿದೆ. ಇದರ ಜತೆಗೆ ಕುವೈತ್‌ನ ಬುಬಿಯಾನ್ ದ್ವೀಪದಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳನ್ನು ಡ್ರೋನ್‌ಗಳ ಮೂಲಕ ಗುರಿಯಾಗಿಸಿಕೊಂಡಿರುವುದಾಗಿ ಇರಾನ್ ಹೇಳಿದೆ.


ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಪೆಟ್ರೋಕೆಮಿಕಲ್ ಸ್ಥಾವರದ ಮೇಲೆ ದಾಳಿ ನಡೆದ ನಂತರ ಬೆಂಕಿ ಕಾಣಿಸಿಕೊಂಡಿದೆ. ಬೊರೂಜ್ ಸ್ಥಾವರದಲ್ಲಿ ತಡೆಹಿಡಿಯುವ ಸಮಯದಲ್ಲಿ ಅವಶೇಷಗಳು ಬಿದ್ದಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಬುಧಾಬಿ ಅಧಿಕಾರಿಗಳು ತಿಳಿಸಿದ್ದಾರೆ. ಅಬುಧಾಬಿ ಮಾಧ್ಯಮ ಕಚೇರಿಯ ಪ್ರಕಾರ, ಹಾನಿಯನ್ನು ನಿರ್ಣಯಿಸುವವರೆಗೆ ಸ್ಥಾವರದಲ್ಲಿನ ಕಾರ್ಯಾಚರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಅದೃಷ್ಟವಶಾತ್, ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ.


ನೈಋತ್ಯ ಇರಾನ್‌ನ ವಿಮಾನ ನಿಲ್ದಾಣದ ಮೇಲೆ ಅಮೆರಿಕ-ಇಸ್ರೇಲ್ ದಾಳಿಗಳು ನಡೆದಿವೆ. ಇಸ್ರೇಲ್ ಗಡಿಯಿಂದ ದೂರದಲ್ಲಿರುವ ದಕ್ಷಿಣ ಲೆಬನಾನ್‌ನ ಕ್ಫರ್ ಹಟ್ಟಾ ಮೇಲೆ ಭಾನುವಾರ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಆರು ಜನರ ಕುಟುಂಬ ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ.


ಅಮೆರಿಕದ ದಾಳಿಗಳ ಬಗ್ಗೆ ಇರಾನ್ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಗರಿಕ ಮೂಲಸೌಕರ್ಯಕ್ಕೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಇರಾನ್ ಆರೋಪಿಸಿದೆ. ಅವರ ಹೇಳಿಕೆಗಳು ನಾಗರಿಕರನ್ನು ಭಯಭೀತಗೊಳಿಸಲು ನೇರ ಮತ್ತು ಸಾರ್ವಜನಿಕ ಪ್ರಚೋದನೆ ಮತ್ತು ಯುದ್ಧ ಅಪರಾಧ ಮಾಡುವ ಉದ್ದೇಶದ ಪುರಾವೆಯಾಗಿದೆ ಎಂದು ಆರೋಪಿಸಿದೆ.


ಒಟ್ಟಾರೆ ಡೊನಾಲ್ಡ್ ಟ್ರಂಪ್ ಅವರ ಮಾತುಗಳ ಮೇಲೆ ಯುದ್ಧ ನಿರ್ಣಾಯಕವಾಗಲಿದ್ದು, ಮುಂಬರುವ ದಾಳಿಗಳ ಬಗ್ಗೆ ಸುಳಿವುಗಳು ಸಿಗಲಿದೆ.

ಸಮಯ ಮೀರುತ್ತಿದೆ:ಟ್ರಂಪ್


ಇರಾನ್, ಅಮೆರಿಕ ಜೊತೆ ಒಪ್ಪಂದ ಮಾಡಿಕೊಳ್ಳಲು ಇದು ಸಕಾಲ, ಈಗಾಗಲೇ ಸಮಯ ಮೀರುತ್ತಿದೆ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.


ಹಾರ್ಮುಜ್ ಜಲಸಂಧಿ ಮತ್ತೆ ಆರಂಭಿಸಲು ಇರಾನ್‌ಗೆ ೨೪ ಗಂಟೆಗಳ ಕಾಲ ಗಡುವು ವಿಸ್ತರಿಸಿದ್ದಾರೆ, ಇರಾನ್ ಹಾರ್ಮುಜ್ ಜಲಸಂಧಿ ಮತ್ತೆ ತೆರೆಯದಿದ್ದರೆ ತೀವ್ರ ಪರಿಣಾಮಗಳಿಗೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


ಇರಾನ್ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ಸಂಭವನೀಯ ಅಮೆರಿಕದ ದಾಳಿ ನಡೆಯಲಿದ್ದು ಇರಾನ್‌ಗೆ ನರಕ ತೋರಿಸುತ್ತೇವೆ ಎಂದಿದ್ದಾರೆ.