ಇರಾನ್ ಬಿಕ್ಕಟ್ಟು-ಕಚ್ಚಾ ತೈಲ ದುಬಾರಿ

ನವದೆಹಲಿ,ಮಾ.೩-ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ಪರಿಣಾಮವು ಈಗ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಪರಿಸ್ಥಿತಿ ಹದಗೆಟ್ಟರೆ ಮತ್ತು ತೈಲ ಉತ್ಪಾದನೆ ಅಥವಾ ಪೂರೈಕೆಯಲ್ಲಿ ಪ್ರಮುಖ ಅಡಚಣೆಗಳು ಉಂಟಾದರೆ, ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ $೧೦೦ ಕ್ಕಿಂತ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.ಇದು ಜಾಗತಿಕ ಆರ್ಥಿಕತೆಯ ಮೇಲೆ ಹಾಗೂ ಭಾರತದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ನೇರ ಪರಿಣಾಮ ಬೀರಬಹುದು.


ಅಮೆರಿಕದ ತೈಲ ಬೆಲೆಯಲ್ಲಿ ೭.೬% ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ (೧೫೯ ಲೀಟರ್) ೬೬೦೪.೮೩ ರೂ. ಆಗಿದೆ. ಬ್ರೆಂಟ್ ದರದಲ್ಲಿ ೮.೬% ಹೆಚ್ಚಳವಾಗಿ ೭೨೪೪.೯೮ ರೂ. ತಲುಪಿದೆ. ಹೋರ್ಮುಜ್ ಜಲಸಂಧಿಯ ಮೂಲಕ ಜಗತ್ತಿನ ೨೦% ರಷ್ಟು ತೈಲ ಸಾಗಣೆಯಾಗುತ್ತಿತ್ತು. ಆದರೆ ಅಲ್ಲಿ ಸಾಗುತ್ತಿದ್ದ ಹಡಗುಗಳ ಮೇಲಿನ ದಾಳಿ ಮುಂದುವರೆದಿರುವ ಕಾರಣ ಪೂರೈಕೆಗೆ ಅಡಚಣೆಯಾಗಿದೆ. ಇದರಿಂದಾಗಿ ಬೇಡಿಕೆ ಹೆಚ್ಚಿ, ದರದಲ್ಲೂ ಏರಿಕೆಯಾಗಿದೆ.

ಈ ಹಾರ್ಮುಜ್ ಜಲಸಂಧಿಯ ಮೂಲಕ ಸಂಚಾರಕ್ಕೆ ಅಡ್ಡಿಯು ಜಾಗತಿಕ ತೈಲ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ವರದಿ ಎಚ್ಚರಿಸಿದೆ. ವಿಶ್ವದ ತೈಲ ರಫ್ತಿನ ಹೆಚ್ಚಿನ ಭಾಗಗಳಿಗೆ ಈ ಮಾರ್ಗವು ನಿರ್ಣಾಯಕವಾಗಿದೆ. ಯಾವುದೇ ದಿಗ್ಬಂಧನ ಅಥವಾ ಅಡ್ಡಿಯು ಇಂಧನ ಮಾರುಕಟ್ಟೆಯಲ್ಲಿ ತೀವ್ರ ಏರಿಳಿತಗಳಿಗೆ ಕಾರಣವಾಗಬಹುದು.


ತನ್ನ ತೈಲದ ಶೇ. ೮೫-೯೦ ರಷ್ಟು ಆಮದುಗಳನ್ನೇ ಅವಲಂಬಿಸಿರುವ ಭಾರತಕ್ಕೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಬಹುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸದಿದ್ದರೆ, ತೈಲ ಕಂಪನಿಗಳು ಪ್ರತಿ ಲೀಟರ್‌ಗೆ ೧೨ ರಿಂದ ೧೪ ರೂಪಾಯಿಗಳಷ್ಟು ಬೆಲೆಗಳನ್ನು ಹೆಚ್ಚಿಸಬಹುದು ಎಂಬ ಭಯವೂ ಇದೆ.