
ಬೆಂಗಳೂರು, ಫೆ.೧೨: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ೨೦೨೬ರ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಸಂಬಂಧ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ಹಂಚಿಕೊಂಡ ಸಚಿವರು, ಐಪಿಎಲ್ ಪಂದ್ಯಗಳ ಆಯೋಜನೆ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿತ್ತು. ನಮ್ಮ ಅಧಿಕಾರಿಗಳು ನಿವೃತ್ತ ನ್ಯಾಯಮೂರ್ತಿ ಕುನ್ಹಾ ಅವರ ವರದಿಯ ಆಧಾರದ ಮೇರೆಗೆ ಅವರ ಶಿಫಾರಸುಗಳನ್ನು ತಿಳಿಸಲಾಗಿತ್ತು.
ಭವಿಷ್ಯದಲ್ಲಿ ಐಪಿಎಲ್ ಅಥವಾ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಬೇಕಾದರೆ, ಕುನ್ಹಾ ಅವರ ಶಿಫಾರಸುಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿತ್ತು. ಇದಕ್ಕೆ ಅನುಗುಣವಾಗಿ ಕೆಎಸ್ ಸಿಎ ಈಗಾಗಲೇ ಕೆಲಸಗಳನ್ನು ಪ್ರಾರಂಭಿಸಿದ್ದಾರೆ. ಅಲ್ಪವಾಧಿ ಸಲಹೆಗಳನ್ನು ಪೂರೈಸಿದ್ದಾರೆ.
ಹಿಂದಿನ ಐಪಿಎಲ್ ಚಾಂಪಿಯನ್ ತಂಡದ ತವರು ನೆಲದಲ್ಲಿ ಮರು ವರ್ಷವನ್ನು ಆರಂಭಿಸುವುದು ವಾಡಿಕೆ. ಆ ಪ್ರಕಾರ ಬೆಂಗಳೂರಿನಲ್ಲಿ ಈ ಬಾರಿ ಐಪಿಎಲ್ ಉದ್ಘಾಟನಾ ಪಂದ್ಯ ಆಯೋಜನೆಗೆ ಆರ್ ಸಿಬಿ ಮತ್ತು ಕೆಎಸ್ ಸಿಎ ಮನವಿ ಮಾಡಿವೆ.
ಈ ಸಂಬಂಧ ಜಿಬಿಎ ಅಧ್ಯಕ್ಷರು ಹಾಗೂ ಪೊಲೀಸ್ ಆಯುಕ್ತಕರ ಹಾಗೂ ವಿವಿಧ ಇಲಾಖೆಗಳ ಸಮ್ಮುಖದಲ್ಲಿ ಸರ್ಕಾರ ಒಂದು ಸಮಿತಿ ರಚಿಸಿತ್ತು. ಈ ಸಮಿತಿ ವರದಿ ಸಲ್ಲಿಸಿದೆ.ಇದರ ಸಾಧಕ -ಬಾಧಕಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಿದ್ದೇವೆ. ನಂತರ ಅಂತಿಮ ನಿರ್ಧಾರವನ್ನು ಘೋಷಿಸಲಿದ್ದೇವೆ ಎಂದು ಹೇಳಿದರು.
ಮಾರ್ಚ್ ಮೂರನೇ ವಾರದಲ್ಲಿ ಐಪಿಎಲ್ ಆರಂಭವಾಗಲಿರುವ ಕಾರಣ ಬೆಂಗಳೂರಿನಲ್ಲಿ ಐಪಿಎಲ್ ಆಯೋಜನೆ ಕುರಿತು ಇಂದು ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
























