Home ಮುಖಪುಟ ಸುದ್ದಿ ಉಪಚುನಾವಣೆ ಬಳಿಕ ಒಳಮೀಸಲಾತಿ ವಿಶೇಷ ಸಭೆ: ಪರಂ

ಉಪಚುನಾವಣೆ ಬಳಿಕ ಒಳಮೀಸಲಾತಿ ವಿಶೇಷ ಸಭೆ: ಪರಂ

ತುಮಕೂರು, ಮಾ. ೨೮- ರಾಜ್ಯದ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಒಳಮೀಸಲಾತಿ ಸಂಬಂಧ ಚರ್ಚಿಸಲು ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ. ಚುನಾವಣೆ ಬಳಿಕ ಈ ಸಭೆ ನಡೆಯಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚರ್ಚೆ ಮಾಡಲು ಆಗುತ್ತಿಲ್ಲ. ಹಾಗಾಗಿ ಸಭೆಯನ್ನು ಮುಂದೂಡಿದ್ದೇವೆ ಅಷ್ಟೇ ಎಂದರು.


ಹಾಗೆಯೇ ಮಧುಗಿರಿಯಲ್ಲಿ ಏ. ೩ ರಂದು ಮುಖ್ಯಮಂತ್ರಿಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವೂ ಸಹ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದೆ. ಚುನಾವಣೆ ಬಳಿಕ ಎಲ್ಲ ಕಾರ್ಯಕ್ರಮಗಳು, ಸಭೆಗಳು ನಡೆಯಲಿವೆ ಎಂದು ಅವರು ಹೇಳಿದರು.


ತುಮಕೂರಿಗೆ ಏ. ೧ ರಂದು ಸಿದ್ದಗಂಗೆಯ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯರ ೧೧೯ನೇ ಜಯಂತ್ಯೋತ್ಸವದಲ್ಲಿ ಭಾಗಿಯಾಗಲು ರಾಷ್ಟ್ರಪತಿಗಳು ಅಂದು ಬೆಳಿಗ್ಗೆ ೧೦.೩೦ಕ್ಕೆ ಆಗಮಿಸುತ್ತಿದ್ದಾರೆ. ನಮ್ಮ ಜಿಲ್ಲೆಗೆ ಆಗಮಿಸುತ್ತಿರುವ ರಾಷ್ಟ್ರಪತಿಗಳು ಸ್ವಾಗತ ಕೋರುತ್ತೇನೆ. ನಮ್ಮ ಜಿಲ್ಲೆಗೆ ಅವರು ಭೇಟಿ ನೀಡುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.


ಶ್ರೀಗಳ ಆದರ್ಶ ಜೀವಂತವಾಗಿ ಜನಸಮುದಾಯಕ್ಕೆ ತಲುಪುತ್ತಿದೆ. ಪ್ರತಿ ವರ್ಷವೂ ಶ್ರೀಗಳ ಆದರ್ಶ, ಜೀವನ ಚರಿತ್ರೆ ಪುನರುಚ್ಚಾರವಾಗುತ್ತಿದೆ. ಇದು ನಮ್ಮ ನಾಡಿನ ಸುದೈವ ಎಂದರು.


ಐಪಿಎಲ್ ಪಂದ್ಯಕ್ಕೆ ಶುಭ ಹಾರೈಕೆ


ಕಳೆದ ವರ್ಷ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಕಸ್ಮಿಕ ಘಟನೆ ನಡೆದು ಹೋಯಿತು. ಈ ಘಟನೆ ನಡೆಯಬಾರದಿತ್ತು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗುತ್ತಿರುವ ಮೊದಲನೇ ಆರ್‌ಸಿಬಿ ಪಂದ್ಯಕ್ಕೆ ನನ್ನ ಶುಭ ಹಾರೈಕೆಗಳು ಎಂದರು.


೧೪ ಪಂಚಾಯ್ತಿಗಳ ಸೇರ್ಪಡೆ ರದ್ದಾಗಿಲ್ಲ


ತುಮಕೂರು ಮಹಾನಗರ ಪಾಲಿಕೆಗೆ ೧೪ ಪಂಚಾಯ್ತಿಗಳನ್ನು ಸೇರ್ಪಡೆ ಮಾಡುವ ಪ್ರಸ್ತಾವನೆ ರದ್ದಾಗಿಲ್ಲ. ಆದರೆ ೨೦೨೭ರ ವರೆಗೆ ಜನಗಣತಿ ನಡೆಯಲಿದೆ. ಈ ಜನಗಣತಿ ಸಮೀಕ್ಷೆ ಬಳಿಕ ಯಾವ ಯಾವ ಹಳ್ಳಿಗಳನ್ನು ಸೇರಿಸಬೇಕು ಎಂಬ ಕುರಿತು ತೀರ್ಮಾನಿಸಲಾಗುವುದು ಎಂದರು.


ತುಮಕೂರು ಜಿಲ್ಲೆಯಲ್ಲಿ ಇದುವರೆಗೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ಜಿಲ್ಲೆಯ ೭೦ ಕಡೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಸಮಸ್ಯೆ ಇದೆ. ಈಗಾಗಲೇ ೧೫ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.


ತುಮಕೂರು ತಾಲ್ಲೂಕು, ಸಿರಾ ತಾಲ್ಲೂಕು ಹಾಗೂ ಪಾವಗಡ ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ನೀಡಿದೆ. ಇದಕ್ಕೆ ಪೂರಕವಾಗಿ ಅಗತ್ಯ ಕ್ರಮಗಳನ್ನು ಸಹ ಜಿಲ್ಲಾಡಳಿತ ಕೈಗೊಂಡಿದೆ ಎಂದು ಅವರು ಹೇಳಿದರು.


ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಏಪ್ರಿಲ್ ಅಂತ್ಯದವರೆಗೆ ನೀರಿನ ಸಂಗ್ರಹ ಇರಲಿದೆ. ಹಾಗೆಯೇ ಗೊರೂರು ಜಲಾಶಯದಲ್ಲೂ ನೀರಿದೆ. ಸದ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.


ನಾನು ಈಗಾಗಲೇ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ರವರೊಂದಿಗೆ ಚರ್ಚೆಸಿದ್ದೇನೆ. ಹಾಗೆಯೇ ಹೇಮಾವತಿ ನಾಲಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅಧಿಕಾರಿಗಳು ಬುಗುಡನಹಳ್ಳಿ ಜಲಸಂಗ್ರಹಗಾರಕ್ಕೆ ಬಂದು ನೀರಿನ ಮಟ್ಟವನ್ನು ಪರಿಶೀಲನೆ ಮಾಡಿ ಹೋಗಿದ್ದಾರೆ. ಬುಗುಡನಹಳ್ಳಿಯಲ್ಲಿ ನೀರು ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದ ತಕ್ಷಣ ನೀರು ಬಿಡುವಂತೆ ಕೃಷ್ಣ ಬೈರೇಗೌಡರವರೊಂದಿಗೆ ಮಾತನಾಡಿದ್ದೇವೆ ಎಂದು ಅವರು ತಿಳಿಸಿದರು.


ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಂಗಣ ಹಾಗೂ ಈಜು ಕೊಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಈ ಜಾಗವನ್ನು ಸಂಬಂಧಪಟ್ಟ ತಜ್ಞರು ಬಂದು ವೀಕ್ಷಣೆ ಮಾಡಿದ ಬಳಿಕ ಮುಂದಿನ ಕೆಲಸಗಳು ನಡೆಯಲಿವೆ ಎಂದರು.


ತುಮಕೂರಿನ ಹೊರವಲಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ೪೧ ಎಕರೆ ಜಾಗವನ್ನು ಕೆಐಎಡಿಬಿ ವತಿಯಿಂದ ನೀಡಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಈ ಕ್ರೀಡಾಂಗಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ಕೆಎಸ್‌ಸಿಎ ವತಿಯಿಂದ ಕಾರ್ಯಾದೇಶವೂ ಆಗಿದ್ದು, ಇನ್ನೊಂದು ವರ್ಷದಲ್ಲಿ ರಣಜಿ ಪಂದ್ಯಗಳು ನಡೆಯುವ ಮಟ್ಟಿಗೆ ಕ್ರೀಡಾಂಗಣ ನಿರ್ಮಾಣವಾಗುವ ಭರವಸೆ ಇದೆ. ಮುಂದಿನ ೨ ವರ್ಷಗಳಲ್ಲಿ ಕ್ರೀಡಾಂಗಣ ಸಂಪೂರ್ಣ ಸಿದ್ದಗೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುವ ಸಾಧ್ಯತೆ ಇದೆ ಎಂದರು.


ರಾಜ್ಯ ಸರ್ಕಾರದ ವತಿಯಿಂದ ಸೂರ್ಯನಗರದಲ್ಲಿ ೧೬೦೦ ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಈ ಕ್ರೀಡಾಂಗಣ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣಕ್ಕಿಂತಲೂ ದೊಡ್ಡದಾಗಿರಲಿದೆ ಎಂದು ಅವರು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿ.ಪಂ. ಸಿಇಓ ಬಿ.ವಿ. ಅಶ್ವಿಜ ಉಪಸ್ಥಿತರಿದ್ದರು.