ಶಿಶುಹತ್ಯೆ: ತಾಯಿ ಬಂಧನ

ಶಿವಮೊಗ್ಗ, ಆ. ೨೫- ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಶೌಚಾಲಯ ಕೊಠಡಿಯಲ್ಲಿ, ನವಜಾತ ಗಂಡು ಶಿಶುವಿನ ಕತ್ತು ಸೀಳಿ ಕೊಲೆ ಮಾಡಿದ ಪ್ರಕರಣ ಬೇಧಿಸುವಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿಶುವಿನ ಕೊಲೆ ಮಾಡಿದ್ದ ಆರೋಪದ ಮೇರೆಗೆ ತಾಯಿಯನ್ನು ಬಂಧಿಸಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳ್ಳಿ ತಾಲೂಕು ತಿಮ್ಲಾಪುರದ ನಿವಾಸಿ ಶೈಲಾ ಬಂಧಿತ ತಾಯಿ ಎಂದು ಗುರುತಿಸಲಾಗಿದೆ. ಆಪಾದಿತೆಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ರವಿ ಪಾಟೀಲ್ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಸಫಲವಾಗಿದೆ.

ಘಟನೆ ಹಿನ್ನೆಲೆ : ಕಳೆದ ಆಗಸ್ಟ್ ೧೬ ರಂದು ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ನ ಶೌಚಾಲಯದಲ್ಲಿ ಕತ್ತು ಸೀಳಿ ಕೊಂದ ಸ್ಥಿತಿಯಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿತ್ತು.

ಆಸ್ಪತ್ರೆ ಸಿಬ್ಬಂದಿಗಳು ಹೆರಿಗೆ ವಾರ್ಡ್ ನಲ್ಲಿ ದಾಖಲಾಗಿದ್ದ ಮಹಿಳೆಯರು ಹಾಗೂ ಶಿಶುಗಳ ವಿವರ ಕಲೆ ಹಾಕಿದ್ದರು. ಹೆರಿಗೆಯಾದ ಎಲ್ಲ ಶಿಶುಗಳು ವಾರ್ಡ್ ನಲ್ಲಿರುವುದು ಕಂಡುಬಂದಿತ್ತು.

ಅದೇ ದಿನ ಮನೆಯಲ್ಲಿ ಅಬಾರ್ಷನ್ ಆಗಿದೆ ಹಾಗೂ ಹೊಟ್ಟೆ ನೋವೆಂದು ಹೇಳಿ, ಹೆರಿಗೆ ವಾರ್ಡ್ ನಲ್ಲಿ ದಾಖಲಾಗಿದ್ದ ಶೈಲಾ ಬಳಿಯೂ ಆಸ್ಪತ್ರೆ ಸಿಬ್ಬಂದಿಗಳು ವಿಚಾರಿಸಿದ್ದರೂ. ಆದರೆ ಶಿಶು ತನ್ನದಲ್ಲವೆಂದು ನಿರಾಕರಿಸಿದ್ದಳು.

ಈ ಕುರಿತಂತೆ ಆಸ್ಪತ್ರೆ ಆಡಳಿತ ಮಂಡಳಿಯು, ದೊಡ್ಡಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಶೈಲಾ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಆಕೆಯ ಚಲನವಲನದ ಮೇಲೆ ನಿಗಾವಹಿಸಿದ್ದರು.

ಆಕೆ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ, ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಶೌಚಾಲಯದಲ್ಲಿ ಪತ್ತೆಯಾದ ಶಿಶು ತನ್ನದಾಗಿದ್ದು, ತಾನೇ ಕೊಲೆ ಮಾಡಿರುವ ಸಂಗತಿ ಬಾಯ್ಬಿಟ್ಟಿದ್ದಳು.

ಕಾರಣವೇನು? : ಈಗಾಗಲೇ ಶೈಲಾಗೆ ಇಬ್ಬರು ಮಕ್ಕಳಿದ್ದಾರೆ. ಮತ್ತೊಂದೆಡೆ, ೪ ವರ್ಷಗಳ ಹಿಂದೆ ಸಂತಾನಹರಣ ಚಿಕಿತ್ಸೆಯೂ ಆಗಿತ್ತು. ಇದರ ನಡುವೆ ಆಕೆ ಗರ್ಭೀಣಿಯಾಗಿದ್ದಳು. ಇದನ್ನು ಕುಟುಂಬದವರಿಂದ ಆಕೆ ಮುಚ್ಚಿಟ್ಟಿದ್ದಳು.

ಈ ನಡುವೆ ಆಗಸ್ಟ್ ೧೬ ರಂದು ತನಗೆ ಮನೆಯಲ್ಲಿ ತನಗೆ ಅಬಾರ್ಷನ್ ಆಗಿದೆ ಹಾಗೂ ಹೊಟ್ಟೆ ನೋವೆಂದು ಹೇಳಿ, ಶೈಲಾ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಳು. ಈ ವೇಳೆ ಕೊಲೆ ಮಾಡಿದ ಶಿಶುವವನ್ನು ಹೆರಿಗೆ ವಾರ್ಡ್ ನ ಶೌಚಾಲಯದಲ್ಲಿ ಹಾಕಿದ್ದಳು ಎಂದು ಹೇಳಲಾಗುತ್ತಿದೆ.

ಆದರೆ ಕೆಲ ಮೂಲಗಳ ಪ್ರಕಾರ, ಹೆರಿಗೆ ವಾರ್ಡ್ ನಲ್ಲಿ ದಾಖಲಾಗಿದ್ದ ಮಹಿಳೆಯೋರ್ವರನ್ನು ನೋಡಲು ಆಗಮಿಸಿದ ವೇಳೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಶೌಚಾಲಯಕ್ಕೆ ತೆರಳಿದ ವೇಳೆ ಹೆರಿಗೆಯಾಗಿದೆ. ಅಲ್ಲಿಯೇ ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್ ನಿಂದ ಮಗುವಿನ ಕತ್ತು ಸೀಳಿ ಕೊಲೆ ಮಾಡಿದ್ದಳು ಎಂದು ಹೇಳಲಾಗಿದೆ.