
ಕಲಬುರಗಿ,ಏ.6-ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಏಜೆನ್ಸಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸಂಘಟನಾ ವೇದಿಕೆ ಸಂಸ್ಥಾಪಕ, ರಾಜ್ಯಾಧ್ಯಕ್ಷ ಗುರು ಬಂಡಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20-25 ದಿನಗಳಿಂದ ಗ್ಯಾಸ್ ಸಿಲಿಂಡರ್ ಸಮಸ್ಯೆ ಎದುರಾಗಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಿಗೆ ಕೆಲವು ಗ್ಯಾಸ್ ಏಜೆನ್ಸಿಯವರು ಗೃಹ ಬಳಕೆಗೆ ಮೀಸಲಾದ ಸಿಲಿಂಡರ್‍ಗಳನ್ನು ಅನಧಿಕೃತವಾಗಿ ಹೆಚ್ಚಿನ ಹಣ ಪಡೆದು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಗೃಹ ಬಳಕೆಯ ಸಿಲಿಂಡರ್‍ಗಳನ್ನು ಹೆಚ್ಚಿನ ಹಣ ಪಡೆದು ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಿಗೆ ನೀಡುತ್ತಿರುವುದರಿಂದ ಗೃಹ ಬಳಕೆ ಸಿಲಿಂಡರ್‍ಗಳ ಕೊರತೆಯುಂಟಾಗುತ್ತಿದೆ. ಅಲ್ಲದೆ ಒಂದು ಸಿಲಿಂಡರ್ ಬುಕ್ ಮಾಡಿದ ನಂತರ 15 ದಿನಗಳ ನಂತರ ಪೂರೈಕೆ ಮಾಡಲಾಗುತ್ತಿದೆ. ಕೆಲವೊಂದು ವಿಭಕ್ತ ಕುಟುಂಬಗಳಲ್ಲಿ ಹೆಚ್ಚಿನ ಜರು ಇರುವುದರಿಂದ ಅಂತಹ ಕುಟುಂಬಗಳು ಒಂದು ಸಿಲಿಂಡರ್‍ನ್ನು 30 ದಿನಗಳವರೆಗೆ ಬಳಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಿಗೆ ವಾಣಿಜ್ಯ ಬಳಕೆಯ ಸಿಲಿಂಡರ್ ದೊರೆಯುತ್ತಿದ್ದರೂ ಕೆಲ ಏಜೆನ್ಸಿಯವರು 1800 ರೂ ರಿಂದ 1900 ಪಡೆದು ಅನಧಿಕೃತವಾಗಿ ಸಿಲಿಂಡರ್‍ಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನ ಹರಿಸಿ ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಅವ್ಯವಹಾರ ನಡೆಸುತ್ತಿರುವ ಏಜೆನ್ಸಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ವೇದಿಕೆಯ ಪ್ರದೀಪ ಓಂಕಾರ, ಸಚಿನ್ ಪೂಜಾರಿ, ಸಾಗರ ಭಾವಿ, ಅನಿಲ ಬಂಡಿ, ಶಿವು, ಶಿವಕುಮಾರ ಪಾಟೀಲ, ಬೀರು ಪೂಜಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




















