ಸಿಎಂ ಬೀಳಿಸೋಕಾ, ಡಿಕೆಶಿ ಏಳಿಸೋಕಾ

ಶಾಸಕರ ವಿದೇಶಿ ಪ್ರವಾಸಕ್ಕೆ ವ್ಯಂಗ್ಯ

ಬೆಂಗಳೂರು, ಫೆ. ೧೨- ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಹೋಗುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೀಳಿಸೋಕಾ ಅಥವಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಏಳಿಸೋಕಾ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.


ರಾಜ್ಯದಲ್ಲಿ ಅಭಿವೃದ್ಧಿ ಮಾಡಲು ಹಣ ಇಲ್ಲ. ಕ್ಷೇತ್ರದಲ್ಲಿ ಶಾಸಕರಿಗೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಕೊಡುತ್ತಿಲ್ಲ. ಆದರೆ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಹೊರಟಿದ್ದಾರೆ. ಸಭಾಧ್ಯಕ್ಷರು ಶಾಸಕರ ವಿದೇಶ ಪ್ರವಾಸಕ್ಕೆ ತಡೆ ನೀಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.


ಶಾಸಕರು ಅಧ್ಯಯನ ಪ್ರವಾಸಕ್ಕೆ ವಿದೇಶಕ್ಕೆ ಹೋಗಬೇಕಾದರೆ ನಿಯಮಗಳಿವೆ. ಸರ್ಕಾರದ ವೆಚ್ಚದಲ್ಲಿ ಹೋಗಬೇಕು. ಆದರೆ ಸರ್ಕಾರದಲ್ಲಿ ಹಣ ಇಲ್ಲ. ಸಚಿವರೊಬ್ಬರು ಶಾಸಕರನ್ನು ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಹಾಗಾದರೆ ಆ ಮಂತ್ರಿ ಯಾರು, ವಿದೇಶ ಪ್ರವಾಸಕ್ಕೆ ಶಾಸಕರ ವೆಚ್ಚದ ಹಣ ಲೂಟಿ ಹೊಡೆದ ಹಣನಾ, ಈ ಸರ್ಕಾರಕ್ಕೆ ಮಾನಮರ್ಯಾದೆ ಇದೆಯಾ ಎಂದು ಹರಿಹಾಯ್ದರು.


ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಔಷಧಿ ಖರೀದಿಗೂ ಖಜಾನೆಯಲ್ಲಿ ಹಣ ಇಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ತೀವ್ರವಾಗಿ ಎಂದರು.
ಉತ್ತರ ಕರ್ನಾಟಕದ ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಸಾಲ ಮಾಡಿ ಖರೀದಿಸಲಾಗುತ್ತಿದೆ. ಆರೋಗ್ಯ ಸಚಿವರು ಮಾರ್ಚ್, ಏಪ್ರಿಲ್‌ಗೆ ಟೆಂಡರ್ ಅಂತಿಮಗೊಳಿಸುವುದಾಗಿ ಹೇಳಿದ್ದಾರೆ. ಟೆಂಡರ್ ಮುಗಿದು ಔಷಧಿಗಳು ಆಸ್ಪತ್ರೆಗೆ ತಲುವುದು ಯಾವಾಗ ಎಂದು ಪ್ರಶ್ನಿಸಿದರು.


ಕಳೆದ ವರ್ಷದ ೨ ತಿಂಗಳ ಗೃಹಲಕ್ಷ್ಮೀ ಬಾಕಿಯೂ ಕೊಟ್ಟಿಲ್ಲ, ಔಷಧಿ ಖರೀದಿಗೂ ಹಣ ಇಲ್ಲ. ಇವೆಲ್ಲಾ ಸರ್ಕಾರ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದರು.