
ಬೆಂಗಳೂರು, ಫೆ. ೨೮: ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ. ಹಣೆಬರಹ ಇಲ್ಲ ಎಂದರೆ ಯಾರೂ ಏನೂ ಮಾಡಲು ಆಗುವುದಿಲ್ಲ” ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಅತನಾಡಿದ ಅವರು, “ತ್ಯಾಗ ಮಾಡಲು ಶಸ್ತ್ರ ಇರಬೇಕಲ್ಲವೇ? ಶಸ್ತ್ರವೇ ಇಲ್ಲವಲ್ಲ. ಶಸ್ತ್ರ ಇದೆ ಎಂದು ನಾನು ಯಾವಾಗ ಹೇಳಿದ್ದೆ. ಶಸ್ತ್ರವೇ ಇಲ್ಲದಿದ್ದಾಗ ಶಸ್ತ್ರತ್ಯಾಗದ ಪ್ರಶ್ನೆಯೇ ಬಾರದು ಎಂದು ಕೇಳಿದರು.
ತಾಳ್ಮೆಯ ಅಸ್ತ್ರ ಇದೆ ಎಂದಿದ್ದೀರಿ ಎಂದಾಗ, “ಈಗಲೂ ತಾಳ್ಮೆ ಇರಲಿ ಎಂದು ಹೇಳುತ್ತಿದ್ದೇನೆ” ಎಂದರು. ಶಸ್ತ್ರ, ತಂತ್ರ, ಯುದ್ಧ ಇಲ್ಲದೇ ಬಗೆಹರಿಯುವುದೇ ಎಂಬ ಪ್ರಶ್ನೆಗೆ, “ಇದು ರಾಜಕಾರಣ. ಇಲ್ಲಿ ಶಸ್ತ್ರ ಹಾಗೂ ಅಸ್ತ್ರ ಬೇಕಾಗಿಲ್ಲ” ಎಂದರು.
ಶಾಸಕರು ದೆಹಲಿಗೆ ಹೋಗುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಶಾಸಕರನ್ನೇ ಕೇಳಿ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ನಾನು ಊರಲ್ಲಿ ಇರಲಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ, ಯಾವ ಹೇಳಿಕೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಪಕ್ಷ ಅದನ್ನು ಗಮನಿಸಲಿದೆ” ಶಾಸಕ ಬಾಲಕೃಷ್ಣ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್ ಕುರಿತು ಹೇಳಿದರು.
ಶಾಸಕರ ಆಗ್ರಹದಲ್ಲಿ ನ್ಯಾಯ ಇದೆ ಅಲ್ಲವೇ ಎಂದು ಕೇಳಿದಾಗ, “ಶಾಸಕರ ವಿಚಾರಧಾರೆ ಅವರಿಗೆ ಹಾಗೂ ಸಂಬಂಧಿಸಿದ್ದೇ ಹೊರತು, ನನಗಲ್ಲ. ಪಕ್ಷ ಅವರ ವಿಚಾರಗಳನ್ನು ಗಮನಿಸಲಿದೆ. ನಾವು ಆ ವಿಚಾರದಲ್ಲಿ ಹೇಳಲು ಬರುವುದಿಲ್ಲ “ಎಲ್ಲದಕ್ಕೂ ತಾಳ್ಮೆ ಇರಲಿ” ಎಂದರು.
ಸಿದ್ದರಾಮಯ್ಯ ಅವರನ್ನು ಬದಲಿಸುವುದಾದರೆ ದಲಿತ ಸಿಎಂ ಮಾಡಬೇಕು ಎಂಬ ಹೆಚ್.ಸಿ ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಎಲ್ಲರಿಗೂ ಆಸೆ ಇದೆ. ಇದರಲ್ಲಿ ತಪ್ಪೇನಿಲ್ಲ” ಎಂದರು.
ನಿಮ್ಮ ಸಹೋದರರನ್ನು ಸಿಎಂ ಹುದ್ದೆಯಲ್ಲಿ ಕೂರಿಸಲು ನಿಮ್ಮ ಪ್ರಯತ್ನ ಹೇಗಿದೆ, ನಿಮ್ಮ ಬಳಿ ಶಾಸಕರ ಸಂಖ್ಯೆ ಹೆಚ್ಚಾಗಿದೆಯೇ ಎಂದು ಕೇಳಿದಾಗ, “ನನಗೆ ಆ ಬಗ್ಗೆ ಗೊತ್ತಿಲ್ಲ. ಶಾಸಕರ ವಿಚಾರ ಬಿಟ್ಟು ಬಮೂಲ್ ವಿಚಾರ ಏನಾದರೂ ಇದ್ದರೆ ಕೇಳಿ, ಪ್ರತಿಕ್ರಿಯೆ ನೀಡುವೆ’ ಎಂದರು.
ಮಾರ್ಚ್ ೬ ರಂದು ಕೆಎಂಎಫ್ ಚುನಾವಣೆ ನಡೆಯಲಿದೆಯೇ ಎಂದು ಕೇಳಿದಾಗ, “ಚುನಾವಣೆ ಯಾವಾಗ ಮಾಡಬೇಕು ಎಂದು ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಆಗ ಪಕ್ಷ ತೀರ್ಮಾನ ಮಾಡುವ ವ್ಯಕ್ತಿಯೇ ಸ್ಪರ್ಧೆ ಮಾಡಲಿದ್ದಾರೆ” ಎಂದರು.






























