
ಬೆಂಗಳೂರು, ಫೆ. ೨೨- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿಗಾಗಿ ಜಾತಿ ಎಳೆದು ತಂದಿದ್ದಾರೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪವನ್ನು ತಮಾಷೆಯಾಗಿ ಸ್ವೀಕರಿಸಿದ್ದೇನೆ. ಅವರ ಹೇಳಿಕೆ ನನಗೆ ಅಚ್ಚರಿ ತಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ, ಮಾಜಿ ಪ್ರಧಾನಿ ದೇವೇಗೌಡರು ಎಷ್ಟು ಜನ ಒಕ್ಕಲಿಗ ನಾಯಕರನ್ನು ಪಕ್ಷದಲ್ಲಿ ಬೆಳೆಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ದಿನದ ಆಚರಣೆಯ ಅಂಗವಾಗಿ ಪತ್ರಿಕೆಯೊಂದಕ್ಕೆ ನಾನು ಬರೆದಿದ್ದ ಲೇಖನ ರಾಜ್ಯ ರಾಜಕೀಯ ವಲಯದಲ್ಲಿ ಬಹುಮುಖ ಚರ್ಚೆಗೆ ಕಾರಣವಾಗಿರುವುದನ್ನು ನಾನು ಸ್ವಾಗತಿಸುತ್ತೇನೆ. ಸಾಮಾಜಿಕ ನ್ಯಾಯದ ಬಗ್ಗೆ ನಾನು ಇದೇ ಮೊದಲ ಬಾರಿ ಮಾತನಾಡಿಲ್ಲ. ನನ್ನ ನಾಲ್ಕು ದಶಕಗಳ ರಾಜಕೀಯ ಜೀವನವನ್ನು ನೋಡುತ್ತಾ ಬಂದವರಿಗೆ ಇದು ಗೊತ್ತಿರುತ್ತದೆ. ಅಧಿಕಾರ ಇರಲಿ, ಇಲ್ಲದಿರಲಿ ಸಾಮಾಜಿಕ ನ್ಯಾಯದ ಪರವಾದ ನನ್ನ ನಿಲುವು ಅಚಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ನಮ್ಮಲ್ಲಿನ ಜಾತಿ ವ್ಯವಸ್ಥೆ ಬಗ್ಗೆ ನನ್ನನ್ನು ಟೀಕಿಸುತ್ತಿರುವ ರಾಜಕಾರಣಿಗಳಿಗಿಂತ ಹೆಚ್ಚಿನ ಸ್ಪಷ್ಟತೆ ನನಗಿದೆ. ಈ ಬಗ್ಗೆ ನಾನು ಸಾರ್ವಜನಿಕ ಸಂವಾದಕ್ಕೂ ಸಿದ್ಧ ಎಂದು ಅವರು ಸವಾಲು ಹಾಕಿದ್ದಾರೆ.
ನನ್ನ ಲೇಖನದ ಬಗ್ಗೆ ಕೇಂದ್ರ ಸಚಿವ ಕುಮರಾಸ್ವಾಮಿ ಅವರ ಹೇಳಿಕೆ ಓದಿ ಆಶ್ಚರ್ಯ ಆಗಿಲ್ಲ. ಸಿದ್ದರಾಮಯ್ಯ ನವರು ಕುರ್ಚಿಗಾಗಿ ಜಾತಿ ಎಳೆದು ತಂದಿದ್ದಾರೆ ಎಂಬ ಅವರ ಆರೋಪವನ್ನು ತಮಾಷೆಯಾಗಿ ಸ್ವೀಕರಿಸಿದ್ದೇನೆ ಎಂದು ವ್ಯಂಗ್ಯದ ದಾಟಿಯಲ್ಲಿ ಹೇಳಿದ್ದಾರೆ.
ಕುಮಾರಸ್ವಾಮಿ ಮತ್ತು ಅವರ ತಂದೆ ದೇವೇಗೌಡರು ಖಂಡಿತ ಜಾತಿ ವಾದಿಗಳಲ್ಲ. ಅವರು ಸ್ವಜಾತಿ ವಿರೋಧಿಗಳು. ಅದಕ್ಕಿಂತಲೂ ಮುಖ್ಯವಾಗಿ ಕುಟುಂಬವಾದಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದ್ದಾರೆ.
ಜೆಡಿಎಸ್‌ನ ಈ ನಾಯಕರುಗಳಿಗೆ ತಮ್ಮ ಜಾತಿ ಒಂದು ವೋಟ್ ಬ್ಯಾಂಕ್ ಅಷ್ಟೆ. ತಂದೆ ಮತ್ತು ಮಕ್ಕಳು ತಮ್ಮ ಕುಟುಂದ ಸ್ವಾರ್ಥಕ್ಕಾಗಿ ರಾಜಕೀಯ ಕ್ಷೇತ್ರದಲ್ಲಿ ಉಳಿದವರನ್ನು ಬಿಟ್ಟು ಬಿಡಿ ಸ್ವಜಾತಿ ನಾಯಕರು ಕೂಡಾ ಬೆಳೆಯದಂತೆ ಒಬ್ಬೊಬ್ಬರನ್ನೇ ಮುಗಿಸುತ್ತಾ ಬಂದವರು. ಹಿಂದೆ, ಇಂದು ಮತ್ತು ಮುಂದೆ ಜೆಡಿಎಸ್‌ನ ತುತ್ತ ತುದಿಯ ನಾಯಕರಾಗಿ ಗೌಡರ ಕುಟುಂಬದವರೇ ಇರುತ್ತಾರೆ ಎಂಬುವುದು ಸತ್ಯ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ ಎಂಬುದನ್ನು ವಿನಯ ಪೂರ್ವಕವಾಗಿ ಕೇಳ ಬಯಸುವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಸನದ ಪುಟ್ಟಸ್ವಾಮಿಗೌಡ, ಸಿ.ಎಸ್. ಪುಟ್ಟೇಗೌಡ, ಜವರೇಗೌಡ, ವಿಶ್ವನಾಥ್, ಹನುಮೇಗೌಡ, ಮಂಡ್ಯದ ಕೆ.ಎನ್. ನಾಗೇಗೌಡ, ಕೆಆರ್ ಪೇಟೆ ಕೃಷ್ಣ, ವೈ.ಕೆ. ರಾಮಯ್ಯ, ಸಿ.ಬೈರೇಗೌಡ, ಬಚ್ಚೇಗೌಡ, ಬಿ.ಎಲ್.ಶಂಕರ್, ಸಿ.ನಾರಾಯಣಸ್ವಾಮಿ, ಚಲುವರಾಯಸ್ವಾಮಿ ಇವರೆಲ್ಲಾ ದೇವೇಗೌಡರನ್ನು ಬಿಟ್ಟು ಬಂದಿರುವುದನ್ನು ನಾನು ವಿವರಿಸಿ ಹೇಳಬೇಕಾಗಿಲ್ಲ ಎಂದಿದ್ದಾರೆ.
ಒಕ್ಕಲಿಗ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದ್ದ ಕಾಂಗ್ರೆಸ್ ಪಕ್ಷ ಮಾತ್ರ. ಕೆಂಗಲ್ ಹನುಮಂತಯ್ಯ ರವರಿಂದ ಹಿಡಿದು ಎಸ್.ಎಂ. ಕೃಷ್ಣ ಅವರವರೆಗೂ ನೂರಾರು ನಾಯಕರನ್ನು ಕಾಂಗ್ರೆಸ್ ಬೆಳೆಸಿದೆ. ದೇವೇಗೌಡರಿಂದ ಮೋಸಕ್ಕೊಳಗಾದ ನಾಯಕರಿಗೆ ಅವಕಾಶ ನೀಡಿ ರಾಜಕೀಯವಾಗಿ ಬೆಳೆಸುತ್ತಿರುವುದು ಕಾಂಗ್ರೆಸ್ ಪಕ್ಷ. ಕೆಂಗಲ್ ಹನುಮಂತಯ್ಯ, ಕಡಿದಾಳು ಮಂಜಪ್ಪ, ಕೃಷ್ಣ ಇವರೆಲ್ಲಾ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರೆ ಇದಕ್ಕೆ ಕಾಂಗ್ರೆಸ್ ಕಾರಣ. ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡಲು ಇರುವವರು ಈಗಲೂ ಇದ್ದಾರೆ. ಡಿ.ಕೆ.ಶಿವಕುಮಾರ್, ಟಿ.ಬಿ.ಜಯಚಂದ್ರ, ಕಿಮ್ಮನೆ ರತ್ನಾಕರ, ಎನ್.ಕೃಷ್ಣಪ್ಪ, ಕೃಷ್ಣಬೈರೇಗೌಡ, ಪಿರಿಯಾಪಟ್ಟಣ ವೆಂಕಟೇಶ್ ನಮ್ಮಲ್ಲಿ ಒಕ್ಕಲಿಗ ನಾಯಕರ ದೊಡ್ಡ ಪಟ್ಟಿಯೇ ಇದೆ. ಜೆಡಿಎಸ್‌ನಲ್ಲಿ ಎಷ್ಟು ಮಂದಿ ಒಕ್ಕಲಿಗ ನಾಯಕರಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ
ಮುಂದೊಂದು ದಿನ ದೇವೇಗೌಡರ ಕುಟುಂಬದವರನ್ನು ಹೊರತುಪಡಿಸಿ ಯಾರಾದರೂ ಒಕ್ಕಲಿಗ ನಾಯಕರು ಮುಖ್ಯಮಂತ್ರಿಯಾದರೆ ಅದು ಕಾಂಗ್ರೆಸ್ ಪಕ್ಷದಿಂದಲೇ ಆಗಲಿದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರವಾಗಿರುವ ಪಕ್ಷ. ಈ ಸೈದ್ಧಾಂತಿಕ ಬದ್ಧತೆಯನ್ನು ಕೇವಲ ಮಾತಿನ ಮೂಲಕ ಅಲ್ಲ, ಕೃತಿಯ ಮೂಲಕವೂ ಮಾಡಿ ತೋರಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು ಮುಖ್ಯಮಂತ್ರಿಗಳಾಗಿದ್ದಾರೆ. ಹಿಂದುಳಿದ ಜಾತಿಗೆ ಸೇರಿದ ನನ್ನನ್ನು ಗುರುತಿಸಿ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿಕೊಟ್ಟಿರುವುದು ಕೂಡಾ ಕಾಂಗ್ರೆಸ್ ಪಕ್ಷ ಇದಕ್ಕಾಗಿ ನಾನು ಪಕ್ಷದ ನಾಯಕರಾದ ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ಅವರಿಗೆ ಆಬಾರಿ ಎಂದಿದ್ದಾರೆ.
ಜಾತಿಯಿಂದ ಮಾತ್ರವಲ್ಲ ಅರ್ಹತೆ ಬಲದಿಂದಲೇ ಮುಖ್ಯಮಂತ್ರಿಯಾಗುವಂತಹ ದಲಿತ ಸಮುದಾಯದ ನಾಯಕರು ಕೂಡಾ ಕಾಂಗ್ರೆಸ್ ಪಕ್ಷದಲ್ಲೇ ಇರುವುದು. ಮುಂದೊಂದು ದಿನ ದಲಿತ ಸಮುದಾಯದಿಂದ ಯಾರಾದರೂ ರಾಜ್ಯದ ಮುಖ್ಯಮಂತ್ರಿಯಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂಬುವುದನ್ನು ವಿಶ್ವಾಸ ಪೂರ್ವಕವಾಗಿ ಹೇಳಬಲ್ಲೆ ಎಂದು ತಿಳಿಸಿದ್ದಾರೆ.
ದಲಿತ ಮುಖ್ಯಮಂತ್ರಿ ಆಶಯವನ್ನು ವ್ಯಕ್ತಪಡಿಸುವ ಸ್ಥಿತಿಯಲ್ಲಿ ಜೆಡಿಎಸ್ ಇಲ್ಲವೆ ಬಿಜೆಪಿ ಇದೆಯೇ ಎಂಬುದನ್ನು ಪ್ರಶ್ನಿಸಿರುವ ಅವರು, ಇದು ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್‌ಗಿರುವ ವ್ಯತ್ಯಾಸ. ನನ್ನ ವಿರುದ್ಧ ರಾಜಕೀಯ ಆರೋಪ ಮಾಡುತ್ತಿರುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.




























