
ಕಲಬುರಗಿ,ಫೆ.8-ಯಾರ್ಯಾರಿಗೆ ಏನೇನು ಯೋಗವಿದೆ ಎಂದು ಹೇಳಲು ನಾನೇನು ಜ್ಯೋತಿಷಿ ಅಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆಯಂತಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು “ಯಾರ್ಯಾರಿಗೆ ಏನೇನು ಯೋಗವಿದೆ ಎಂದು ಹೇಳಲು ನಾನೇನು ಜ್ಯೋತಿಷಿ ಅಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೆಟ್ರೋ ದರ ಪರಿಷ್ಕರಣೆ ಮಾಡುವುದು ಕೇಂದ್ರ ಸರ್ಕಾರ. ಅವರು ದರ ಏರಿಕೆ ಮಾಡಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಪದೇ ಪದೇ ದರ ಏರಿಕೆ ಮಾಡುತ್ತಿದೆ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಹುರುಳಿಲ್ಲದ್ದು ಎಂದರು.























