
ಕಲಬುರಗಿ,ಫೆ.11-ಸ್ಟೇಷನ್ ಬಜಾರ್ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಮನೆಗಳ್ಳರನ್ನು ಬಂಧಿಸಿ 16.22 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ನಗದು ಹಣ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹಳೆ ಜೇವರ್ಗಿ ರಸ್ತೆಯ ಪಿಡಬ್ಲ್ಯೂಡಿ ಕ್ವಾಟರ್ಸ್‍ನಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಪಂಚಶೀಲ ನಗರದ ರಾಹುಲ್ ಸಿಂಗ್ ತಂದೆ ಸಾಗರಸಿಂಗ್ ಟಾಕ (19) ಎಂಬಾತನನ್ನು ಬಂಧಿಸಿ 1.60 ಲಕ್ಷ ರೂ.ಮೌಲ್ಯದ 10 ಗ್ರಾಂ.ಬಂಗಾರದ ಸುತ್ತುಂಗರ, 40 ಸಾವಿರ ರೂ.ಮೌಲ್ಯದ 2.5 ಗ್ರಾಂ.ಬಂಗಾರದ ವಂಕಿ, 1.98 ಲಕ್ಷ ರೂ.ಮೌಲ್ಯದ 12.39 ಗ್ರಾಂ.ಬಂಗಾರದ ಲಾಕೆಟ್, 96 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಜೀರಾಮಣಿ, 1.28 ಲಕ್ಷ ರೂ.ಮೌಲ್ಯದ 8 ಗ್ರಾಂ.ಬಂಗಾರದ ಬೋರಮಳ ಹಾಗೂ ಬಂಗಾರ ಮಾರಾಟದಿಂದ ಬಂದ 2 ಲಕ್ಷ ನಗದು ಹಣ ಸೇರಿ 8.22 ಲಕ್ಷ ರೂ.ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಇಂದಿರಾ ನಗರದ ಸಂಜಯಸಿಂಗ್ ಎನ್ನುವವರ ಮನೆಯಲ್ಲಿ ಕಳ್ಳತನ ಮಾಡಿದ್ದ ವಾಚಮ್ಯಾನ್ ಕೆಲಸ ಮಾಡುತ್ತಿದ್ದ ಬೀದರ್ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಸದಲಾಪುರ ಗ್ರಾಮದ ಬಸವರಾಜ ಈರಪ್ಪ ಬಿರಾದಾರ (38) ಬಂಧಿಸಿ 8 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ನಗದು ಹಣ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಡಿಸಿಪಿ ಪ್ರವೀಣ್ ಹೆಚ್.ನಾಯಕ್, ದಕ್ಷಿಣ ಉಪ ವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ, ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಪಿಐ ಗುರುಲಿಂಗಪ್ಪಗೌಡ ಪಾಟೀಲ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಭಾಕರ, ಸಿರಾಜ್ ಪಟೇಲ್, ಶಿವಲಿಂಗ, ಯಲ್ಲಪ್ಪ, ಸಂಗಣ್ಣ, ಮೋಸಿನ್, ಮಲ್ಲಣ್ಣ ಹಾಗೂ ಚನ್ನವೀರ ಅವರನ್ನು ಒಳಗೊಂಡ ತಂಡ ತನಿಖೆ ನಡೆಸಿ ಇಬ್ಬರು ಕಳ್ಳರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿಸಿದರು.





















