Home ಜಿಲ್ಲೆ ಎಸ್‍ಎಸ್‍ಎಲ್‍ಸಿ ಅಂಕ ಪಟ್ಟಿಯಿಂದ ಹಿಂದಿ ಹೊರಕ್ಕೆ: ಖಂಡನೆ

ಎಸ್‍ಎಸ್‍ಎಲ್‍ಸಿ ಅಂಕ ಪಟ್ಟಿಯಿಂದ ಹಿಂದಿ ಹೊರಕ್ಕೆ: ಖಂಡನೆ

ಬೀದರ್:ಮಾ.29:2025-26ನೇ ಶೈಕ್ಷಣಿಕ ವರ್ಷದಿಂದಲೇ ಎಸ್‍ಎಸ್‍ಎಲ್‍ಸಿ ಅಂಕಗಳ ಪಟ್ಟಿಯಿಂದ ಹಿಂದಿ ವಿಷಯ ಹೊರಗಿಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿರುವುದನ್ನು ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ತೀವ್ರವಾಗಿ ಖಂಡಿಸಿದ್ದಾರೆ.
ಸರ್ಕಾರದ ಕ್ರಮ ವಿವೇಚನಾ ರಹಿತ ಹಾಗೂ ಅವೈಜ್ಞಾನಿಕವಾದದ್ದು. ಅವಸರದಲ್ಲಿ ಕೈಗೊಂಡ ಈ ಕ್ರಮ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳವಾರ (ಮಾ.31) ನಡೆಯಲಿರುವ ಎಸ್‍ಎಸ್‍ಎಲ್‍ಸಿಯ ಹಿಂದಿ ವಿಷಯದ ಪರೀಕ್ಷೆಗೆ ವಿದ್ಯಾರ್ಥಿಗಳು ಬಹಳ ಕಷ್ಟಪಟ್ಟು ತಯಾರಿ ಮಾಡಿಕೊಂಡಿದ್ದರು. ಆದರೆ, ಇದೀಗ ಸರ್ಕಾರ, ಏಕಾಏಕಿ, ಹಿಂದಿ ವಿಷಯದ ಅಂಕಗಳನ್ನು ಎಸ್‍ಎಸ್‍ಎಲ್‍ಸಿಯ ಒಟ್ಟು ಅಂಕಗಳಿಗೆ ಸೇರಿಸುವುದಿಲ್ಲ, ಹಿಂದಿಗೆ ಗ್ರೇಡ್ ಮಾತ್ರ ಕೊಡುವುದಾಗಿ ಹೇಳಿದ್ದರಿಂದ ವಿದ್ಯಾರ್ಥಿಗಳಿಗೆ ಆಘಾತವಾಗಿದೆ. ತಮ್ಮ ಶ್ರಮ ವ್ಯರ್ಥವಾಯಿತು ಎನ್ನುವ ನಿರಾಶೆ ಅವರಲ್ಲಿ ಮೂಡಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಸಾಧಕ-ಬಾಧಕಗಳ ಸಮಗ್ರ ಚರ್ಚೆ ನಡೆಸಿದ ನಂತರ ಕ್ರಮ ಕೈಗೊಳ್ಳಬೇಕಿತ್ತು. ಹಿಂದಿ ವಿಷಯದ ಪರೀಕ್ಷೆಗೆ ಎರಡು ದಿನ ಬಾಕಿ ಇರುವಾಗ ಇಂತಹ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಶೈಕ್ಷಣಿಕ ವರ್ಷದ ಆರಂಭದಲ್ಲೇ ಈ ಕುರಿತು ನಿರ್ಣಯ ಕೈಗೊಂಡಿದ್ದರೆ, ಮಕ್ಕಳಲ್ಲಿ ಸ್ಪಷ್ಟತೆ ಇರುತ್ತಿತ್ತು. ಹಿಂದಿ ವಿಷಯಕ್ಕೆ ಹೆಚ್ಚು ಆದ್ಯತೆ ಕೊಟ್ಟು ಅವರು ಸಮಯ ವ್ಯರ್ಥ ಮಾಡಿಕೊಳ್ಳುತ್ತಿರಲಿಲ್ಲ. ಹಿಂದಿ ಭಾಷೆ ಮೂಲಕ ಉತ್ತಮ ಅಂಕ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದ ವಿದ್ಯಾರ್ಥಿಗಳಿಗೆ ಅನ್ಯಾಯವೂ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಈ ವರ್ಷ ಹಿಂದಿ ವಿಷಯದ ಅಂಕಗಳನ್ನೂ ಎಸ್‍ಎಸ್‍ಎಲ್‍ಸಿಯ ಒಟ್ಟು ಅಂಕಗಳಿಗೆ (625) ಪರಿಗಣಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.