ಹೈಕಮಾಂಡ್ ವರ್ಸಸ್ ಕಾಲ

ಬೆಂಗಳೂರು, ಫೆ. ೧೦- ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಮಾತಿನ ಭರಾಟೆ ಜೋರಾಗಿದ್ದು, ಮಾತು ಪ್ರತಿಮಾತು ಬಿರುಸಾಗಿದೆ. ಸಿದ್ದರಾಮಯ್ಯ ಹೈಕಮಾಂಡ್ ಮೇಲಿನ ತಮ್ಮ ನಂಬಿಕೆಯನ್ನು ಪುನರುಚ್ಛಿರಿಸಿದರೇ, ಡಿ.ಕೆ. ಶಿವಕುಮಾರ್ ಕಾಲದ ಮೇಲಿನ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.


ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಈಗಾಗಲೇ ಹಲವು ಬಾರಿ ಪುನರುಚ್ಛರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದೂ ಸಹ ಅದೇ ಮಾತುಗಳನ್ನು ಪುನರಾವರ್ತಿಸಿದ್ದಾರೆ.


ಬೆಂಗಳೂರಿನ ಶಕ್ತಿ ಭವನದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಹೇಳಿದಂತೆ ನಾನು, ಡಿ.ಕೆ.ಶಿವಕುಮಾರ್ ನಡೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಿದರು.


ಕಳೆದ ಮೂರು ತಿಂಗಳಿಂದ ಮಾಧ್ಯಮದವರಾದ ನೀವು ಪ್ರತಿ ಬಾರಿಯೂ ಇದೇ ಪ್ರಶ್ನೆ ಕೇಳುತ್ತಿದ್ದೀರಿ. ಬೇರೆ ಪ್ರಶ್ನೆ ಕೇಳಕ್ಕೋ ಆಗಲ್ವ ಎಂದು ಮಾಧ್ಯಮದವರ ವಿರುದ್ಧ ಗರಂ ಆದ ಮುಖ್ಯಮಂತ್ರಿಗಳು, ನಾನು ಹಿಂದೆಯೇ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ಹೈಕಮಾಂಡ್ ಮಾತೆ ಅಂತಿಮ. ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರೂ ನಾನು ಅದಕ್ಕೆ ಬದ್ಧ. ಅದಕ್ಕೆ ಡಿ.ಕೆ. ಶಿವಕುಮಾರ್ ಸಹ ಒಪ್ಪಿಕೊಳ್ಳಲೇಬೇಕು ಎಂದರು
ಪದೇ ಪದೇ ಇದೇ ಪ್ರಶ್ನೆ ಕೇಳಬೇಡಿ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯ ನಿಧಾನವಾದರೂ ಸರಿ ಕುರ್ಚಿ ಬಿಟ್ಟುಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಸಿಟ್ಟಿನಿಂದಲೇ ಅದನ್ನು ನನ್ನೇಕೆ ಕೇಳುತ್ತೀರಿ. ಯಾರು ಮಾತನಾಡಿದ್ದಾರೋ ಅವರನ್ನೇ ಕೇಳ್ರೀ. ಅದು ಬಿಟ್ಟು ಬೇರೆ ಏನು ಕೇಳೋಕೆ ಬರಲ್ವಾ ನಿಮಗೆ. ಇನ್ಮುಂದೆ ಇದನ್ನು ಮತ್ತೆ ಕೇಳಬೇಡಿ. ಹೈಕಮಾಂಡ್‌ಗೆ ಎಲ್ಲವೂ ಗೊತ್ತಿದೆ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧ ಎಂದರು.


ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದರಂತೆ ನಡೆದುಕೊಳ್ಳುವವನು ನಾನು. ಉಪಮುಖ್ಯಮಂತ್ರಿಗಳು ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.


ಹಬ್ಬದ ನಂತರ ಬಜೆಟ್ ದಿನಾಂಕ


ಶಿವರಾತ್ರಿ ಹಬ್ಬದ ನಂತರ ರಾಜ್ಯ ಬಜೆಟ್ ಮಂಡನೆಯ ದಿನಾಂಕವನ್ನು ತಿಳಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಜೆಟ್ ಪೂರ್ವಭಾವಿ ಸಭೆಗಳು ಮುಗಿದಿವೆ. ಬಜೆಟ್ ಮಂಡನೆ ದಿನಾಂಕ ನಿಗದಿಯಾಗಿದೆಯೇ ಎಂಬ ಪ್ರಶ್ನೆಗೆ ಶಿವರಾತ್ರಿ ಹಬ್ಬ ಕಳೆಯಲಿ ಬಜೆಚ್ ದಿನಾಂಕವನ್ನು ತಿಳಿಸುತ್ತೇನೆ ಎಂದರು.


ಸ್ವತಂ ಖರ್ಚಿನಲ್ಲಿ ಪ್ರವಾಸ


ರಾಜ್ಯದ ಕೆಲ ಶಾಸಕರು ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ, ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಅದನ್ನು ಬೇಡ ಎಂದು ಹೇಳಲು ಆಗುತ್ತಿದೆಯೇ ಎಂದು ಪ್ರಶ್ನಿಸಿದರು.


ರಾಜ್ಯದ ಕೆಲ ಶಾಸಕರು ಸ್ವಂತ ಖರ್ಚಿನಲ್ಲಿ ವಿದೇಶಿ ಪ್ರವಾಸ ಮಾಡುತ್ತಿದ್ದಾರೆ. ಆ ಬಗ್ಗೆ ನನಗೆ ಮಾಹಿತಿ ಇದೆ ಎಂದಷ್ಟೇ ಹೇಳಿದರು .

ಎಲ್ಲದಕ್ಕೂ ಕಾಲವೇ ಉತ್ತರ


ನಾಯಕತ್ವ ಬದಲಾವಣೆ ಸೇರಿದಂತೆ ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ ಎಂಬ ತಮ್ಮ ಮಾತುಗಳನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಮತ್ತೆ ಪುನರುಚ್ಛರಿಸಿದ್ದಾರೆ.


ವರಿಷ್ಠರ ಭೇಟಿಗಾಗಿ ದೆಹಲಿಗೆ ತೆರಳಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದೆಹಲಿಯಲ್ಲಿ ಯಾವೆಲ್ಲಾ ವರಿಷ್ಠರನ್ನು ಭೇಟಿ ಮಾಡಿದ್ದೇನೆ ಎಂಬ ಗುಟ್ಟು ಬಿಟ್ಟು ಕೊಡಲಿಲ್ಲ.


ಯಾರನ್ನು ಭೇಟಿ ಮಾಡಿದ್ದೀರಾ ಎಂಬ ಸುದ್ಧಿಗಾರರ ಪ್ರಶ್ನೆಗೆ ಎಲ್ಲದಕ್ಕೂ ಕಾಲವೆ ಉತ್ತರ ಕೊಡುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮ್ಯ ನಿಧಾನವಾದರೂ ಅಧಿಕಾರ ಬಿಟ್ಟುಕೊಡುತ್ತಾರೆ ಎಂಬ ಡಿ.ಕೆ. ಸುರೇಶ್ ಮಾತಿಗೂ ಸೂಕ್ತ ಪ್ರತಿಕ್ರಿಯೆ ನೀಡದ ಡಿಕೆಶಿ, ಎಲ್ಲದಕ್ಕೂ ಕಾಲವೇ ಉತ್ತರ ಎಂಬುದನ್ನು ಪುನರುಚ್ಛರಿಸಿದರು.


ಪ್ರತಿ ಬಾರಿಯು ಕಾಲವೇ ಉತ್ತರ ಎಂದು ಹೇಳುತ್ತೀರಿ.ಯಾವಾಗ ಕಾಲ ಬರುತ್ತದೆ ಎಂಬ ಪ್ರಶ್ನೆಗೆ ಸಮಯ ನೋಡಿಕೊಂಡು ಹೇಳುತ್ತೇನೆ ಎಂದು ಚುಟುಕಾಗಿ ಉತ್ತರಿಸಿದರು.


ದೆಹಲಿಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಪ್ರಯತ್ನದಲ್ಲಿದ್ದು, ಯಾವ ನಾಯಕರನ್ನು ಭೇಟಿ ಮಾಡಿದ್ದೆ. ಭೇಟಿ ಮಾಡುತ್ತೇನೆ ಎಂದು ಗುಟ್ಟು ಬಿಟ್ಟುಕೊಡದೆ ಸುದ್ದಿಗಾರರ ಎಲ್ಲ ಪ್ರಶ್ನೆಗಳಿಗೂ ಕಾಲವೆ ಉತ್ತರ ಎಂದಷ್ಟೇ ಹೇಳಿದರು.