
ತುಮಕೂರು, ಜು.೨೩- ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ೭ ದಿನಗಳಲ್ಲಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ-ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಶುಭ ಕಲ್ಯಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಿಂದ ಸಿಡಿಲು ಬಡಿಯುವ ಪ್ರದೇಶದ ಸಾರ್ವಜನಿಕರಿಗೆ ಮುಂಚಿತವಾಗಿ ರವಾನಿಸುವ SಒS ಂಟeಡಿಣ ನಂತೆ ಪ್ರತಿಕೂಲ ಹವಾಮಾನ ಸಮಯದಲ್ಲಿ ಹೆಚ್ಚು ಎಚ್ಚರದಿಂದಿರಬೇಕು. ಕೃಷಿ ಕೆಲಸ, ಜಾನುವಾರು ಮೇಯಿಸಲು ಹೋಗಬಾರದು. ಲೋಹದ ತಗಡು ಹೊಂದಿರುವ ಮನೆ, ಮರ, ವಿದ್ಯುತ್ ಉಪಕರಣ, ಸರಬರಾಜು ಮಾರ್ಗ,ಕಂಬ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಜಲಕಾಯಗಳು ಇತರೆ ಪ್ರತ್ಯೇಕ ವಸ್ತುಗಳಿಂದ ದೂರವಿರಬೇಕು. ಕಬ್ಬಿಣದ ಸರಳುಗಳ ಛತ್ರಿ,ಮೊಬೈಲ್ ಫೋನ್ ಬಳಸಬಾರದು. ಮಿಂಚು ಒಬ್ಬರಿಂದ ಒಬ್ಬರಿಗೆ ಸಂಚರಿಸದಂತೆ ಜನ ಸಂದಣಿಯಾಗದಂತೆ ಅಂತರ ಕಾಪಾಡಿಕೊಳ್ಳಬೇಕು.ತುರ್ತು ಚಿಕಿತ್ಸೆಗೆ ಹತ್ತಿರದ ಆರೋಗ್ಯ ಕೇಂದ್ರಗಳ ಮಾಹಿತಿ ಹೊಂದಿರಬೇಕು ಎಂದು ತಿಳಿಸಿದ್ದಾರೆ.
ನದಿ,ಹಳ್ಳ,ಕೆರೆ ದಡ, ಅಪಾಯಕಾರಿಯಾಗಿ ಹರಿಯುವ ನೀರಿನಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ-ಕರುಗಳ ಮೈ ತೊಳೆಯುವುದು, ಫೋಟೋ ಸೆಲ್ಫಿಗಳನ್ನು ತೆಗೆಯುವುದು ಹಾಗೂ ಅಪಾಯವಿರುವ ಸೇತುವೆಗಳ ಮೇಲೆ ಸಂಚರಿಸುವುದು ಮತ್ತು ಇತರೆ ಚಟುವಟಿಕೆಗಳು ನಡೆಸದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ.
ಪೋಷಕರು ತಮ್ಮ ಮಕ್ಕಳನ್ನು ಅಪಾಯಕಾರಿಯಾಗಿ ಹರಿಯುವ ನೀರು ಮತ್ತು ಕೆರೆ-ಕಟ್ಟೆಗಳಲ್ಲಿ ಈಜಲು ಬಿಡದಂತೆ ಜಾಗೃತಿವಹಿಸಬೇಕು. ದುರ್ಬಲ ಮಣ್ಣಿನ ಮನೆ, ಕಟ್ಟಡಗಳು, ದುರ್ಬಲ ಮರದ ಕೊಂಬೆಗಳು, ಜಲಕಾಯ, ವಿದ್ಯುತ್ ವಸ್ತುಗಳಿಂದ ದೂರವಿರಬೇಕು. ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿರಿಸಬೇಕು.
ತೋಟಗಾರಿಕೆ ಬೆಳೆಗಳನ್ನು ಮಳೆಗೆ ಹಾನಿಯಾಗದಂತೆ ಸೂಕ್ತ ರೀತಿಯಲ್ಲಿ ಸಂರಕ್ಷಿಸಿಕೊಳ್ಳಬೇಕು.
ಕೆರೆ-ಕಟ್ಟೆಗಳ ಏರಿ, ಬಂಡ್, ಕೋಡಿಗಳಲ್ಲಿ ನೀರು ಸೋರಿಕೆ ಕಂಡುಬಂದಲ್ಲಿ, ರಸ್ತೆಗಳ ಮೇಲೆ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದ್ದಲ್ಲಿ, ನಿಂತಿದಲ್ಲಿ, ಮರ ಬಿದ್ದು ವಾಹನ ಸಂಚಾರ ಸ್ಥಗಿತವಾಗಿದ್ದಲ್ಲಿ, ವಿದ್ಯುತ್ ಲೈನ್, ಕಂಬ ಬಿದ್ದಿದ್ದಲ್ಲಿ, ಮನೆಯೊಳಗೆ ಮಳೆ ನೀರು ನುಗ್ಗಿದಲ್ಲಿ, ಮನೆ ಗೋಡೆ, ಮೇಲ್ಛಾವಣಿ ಬಿದ್ದಿದ್ದಲ್ಲಿ, ಬೆಳೆ ನಷ್ಟವಾಗಿದ್ದಲ್ಲಿ ಇತರೆ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ಸಹಾಯವಾಣಿ: ೭೩೦೪೯೭೫೫೧೯, ೦೮೧೬-೨೨೧೩೪೦೦ / ೧೫೫೩೦೪, ಬೆಸ್ಕಾಂ ೧೯೧೨, ವಾಟ್ಸ್‌ಆಪ್ ೮೨೭೭೮೮೪೦೧೯ನ್ನು ಸಂಪರ್ಕಿಸಿ ದೂರು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.