
ಕೆಂಗೇರಿ, ಮಾ. ೨೯ : ಉಚಿತ ತಪಾಸಣೆ, ರೋಗ ಪತ್ತೆಗೆ ಆರೋಗ್ಯ ಶಿಬಿರ ಸಹಕಾರಿಯಾಗಿದೆ ಎಂದು ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ
ಕ್ಷೇತ್ರದ ಬ್ಯಾಡರಹಳ್ಳಿ ವಾರ್ಡ್‌ನ ಭಾರತ್‌ನಗರದ ಮಹಾತ್ಮಗಾಂಧಿ ಉದ್ಯಾನ ಬಳಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನಮಠದಸಮಾಜ ಸಂಪರ್ಕ ವೇದಿಕೆ, ಭಾರತ್‌ನಗರ ಸಮಾನ ಮನಸ್ಕರ ವೇದಿಕೆ, ಗಾಂಧಿ ಉದ್ಯಾನವನ ನಡಿಗೆದಾರರ ಕೂಟದ ಹಾಗೂ ನಗರೂರಿನ ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು
ಬಡವರು ಆರ್ಥಿಕ ಸಂಕಷ್ಟದಿಂದ ಕಾಯಿಲೆ ಬಂದರೂ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದಿಲ್ಲ. ಪರಿಣಾಮ ಕಾಯಿಲೆಗಳು ಉಲ್ಬಣಿಸುತ್ತವೆ. ಶಿಬಿರಗಳಲ್ಲಿ ಬಡವರಿಗೆ ಉಚಿತ ಸೇವೆ ಲಭಿಸುವುದರಿಂದ ಆರೋಗ್ಯರಕ್ಷಣೆಗೆ ಅನುಕೂಲವಾಗುತ್ತದೆ ಎಂದರು
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಆಶಯದಂತೆ ನಗರೂರು ಬಿಜಿಎಸ್ ಆಸ್ಪತ್ರೆಯಲ್ಲಿ ಕೈಗೆಟುಕುವ ದರದಲ್ಲಿ ಎಲ್ಲಾ ಬಗೆಯ ಕಾಯಿಲೆಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಿದೆ ಅದರಲ್ಲೂ ಸಾಮಾನ್ಯ ಹೆರಿಗೆ ಐದು ಸಾವಿರ ಹಾಗೂ ಸಿಸೇರಿಯನ್ ಹೆರಿಗೆಯನ್ನು ಕೇವಲ ೮ ಸಾವಿರಕ್ಕೆ ಮಾಡುತ್ತಿರುವುದು ಬಡವರಿಗೆ ವರದಾನವಾಗಿದ್ದು ಸದುಪಯೋಗಪಡಿಸಿಕೊಳ್ಳಿ ಎಂದರು
ಬ್ಯಾಡರಹಳ್ಳಿ ವಾರ್ಡ್ ಜಿಬಿಎ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಆದಿತ್ಯ ರಮೇಶ್ ಮಾತನಾಡಿ ಜನಸಾಮಾನ್ಯರಿಗೆ ನೆರವಾಗುವ ಆರೋಗ್ಯ ಶಿಬಿರ ಸೇರಿ ಸಮಾಜಮುಖಿ ಕಾರ್ಯಗಳನ್ನು ಶಾಸಕ ಎಸ್.ಟಿ ಸೋಮಶೇಖರ್ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದರು.
ತಜ್ಞ ವೈದ್ಯರ ತಪಾಸಣೆ ಹಾಗೂ ಸಮಾಲೋಚನೆಯಿಂದ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಬಡವರಿಗೆ ರಕ್ತದೊತ್ತಡ, ಮಧುಮೇಹ, ಕಣ್ಣಿನ ಸಮಸ್ಯೆ, ಮತ್ತು ಕ್ಯಾನ್ಸರ್‌ನಂತಹ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವಲ್ಲಿ ಆರೋಗ್ಯ ಶಿಬಿರ ಮಹತ್ವದ ಪಾತ್ರ ವಹಿಸಿದೆ ಎಂದು ಇದೇ ವೇಳೆ ತಿಳಿಸಿದರು
ರಕ್ತದ ಒತ್ತಡ, ಮಧುಮೇಹದಂತಹ ಸಾಮಾನ್ಯ ಪರೀಕ್ಷೆಯಿಂದ ಹಿಡಿದು ಹೃದ್ರೋಗ, ಕಣ್ಣು, ಮೂಳೆ, ದಂತ , ಶಿಶು ರೋಗ, ಸ್ತ್ರೀರೋಗ, ಕಿವಿ, ಮೂಗು, ಚರ್ಮ, ಗಂಟಲು, ಕ್ಯಾನ್ಸರ್ ಮಾನಸಿಕ ಕಾಯಿಲೆ ಒಳಗೊಂಡಂತೆ
ಹತ್ತು ಹಲವು ರೋಗಗಳಿಗೆ ಆರೋಗ್ಯ ಶಿಬಿರದಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಯಿತು. ಸಾವಿರಾರು ಜನರು ಶಿಬಿರದ ಸದುಪಯೋಗ ಪಡೆದುಕೊಂಡರು.
ಶಿಬಿರದಲ್ಲಿ ಸ್ವಚ್ಛತೆ ಕಾಪಾಡಿ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವ ಪೌರಕಾರ್ಮಿಕರನ್ನು ಇದೇ ವೇಳೆ ಸನ್ಮಾನಿಸಲಾಯಿತು
ತಿಂಡಿ ಹಾಗೂ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
ರಂಗಕರ್ಮಿ ಕೆ.ವಿ ನಾಗರಾಜ ಮೂರ್ತಿ, ಹೇರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಂಗರಾಜು, ಸಮಾಜ ಸಂಪರ್ಕ ವೇದಿಕೆ ಅಧ್ಯಕ್ಷ ಮಾಧವ್, ಭಾರತ್‌ನಗರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಸಿ.ಟಿ
ನಾಗರಾಜಮೂರ್ತಿ, ಗಾಂಧಿ ಉದ್ಯಾನವನ ನಡಿಗೆದಾರರ ಕೂಟದ ಪದಾಧಿಕಾರಿಗಳು ಇದ್ದರು.



























