ಹಲಸಂಗಿ: ಬಂಗಾರ ಅಂಗಡಿ ದೋಚಿದ ಇಬ್ಬರು ಕಳ್ಳರ ಬಂಧನ

ವಿಜಯಪುರ, ಫೆ. 20: ಹಲಸಂಗಿ ಗ್ರಾಮದಲ್ಲಿ ಮೋಟಾರ್ ಸೈಕಲ್ ಮೇಲೆ ಬಂದು ಗನ್ ತೋರಿಸಿ ಬಂಗಾರ ಅಂಗಡಿಯನ್ನು ದೋಚಿದ್ದ ಇಬ್ಬರು ಅಂತಾರಾಜ್ಯ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಜಪ್ತು ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಬಂಧಿತ ಆರೋಪಿಗಳು ಮೂಲತ: ಸಂಖ ಗ್ರಾಮಕ್ಕೆ ಸೇರಿದರೂ ಹಾಲಿ ಜತ್ತ ನಿವಾಸಿ ಹನಮಂತ ಮಲ್ಲಪ್ಪ ವಾಘೋಲಿ (28), ಪುಣೆಯಲ್ಲಿ ನೆಲೆಸಿದ್ದ ಶಿವರಾಜ್ ಉರ್ಫ್ ಗೌಡಪ್ಪ ರಾವುಸಾಹೇಬ ನಾವಿ (28) ಎಂದು ಗುರುತಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳಿಂದ 205 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ಸೇರಿದಂತೆ 22 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕೃತ್ಯದ ವೇಳೆ ಬಳಸಿದ ಕಂಟ್ರಿಪಿಸ್ತೂಲ್ ಸೇರಿದಂತೆ 3 ಕಂಟ್ರಿ ಪಿಸ್ತೂಲ್, 26 ಜೀವಂತ ಗುಂಡು, ಒಂದು ಏರಗನ್, ಮೋಟಾರ್ ಸೈಕಲ್ ಜಪ್ತು ಮಾಡಿಕೊಳ್ಳಲಾಗಿದೆ ಎಂದರು.
ಕಳೆದ ಜನವರಿ 26 ರಂದು ಹಲಸಂಗಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಇಲಾಖೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಸಾಲಬಾಧೆ ಹಾಗೂ ಷೋಕಿಆಸೆ, ದುಬಾರಿ ಲೈಫ್ ಸ್ಟಾಲ್ ಮೋಹದಿಂದಾಗಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದ್ದು, ಮೊದಲು ಸೊಲ್ಲಾಪೂರದ ಬಂಗಾರ ಅಂಗಡಿ ದೋಚುವ ಕಾರ್ಯಯೋಜನೆ ರೂಪಿಸಿದ್ದು, ನಂತರ ಅಲ್ಲಿ ಜನಸಂದಣಿ ಅಧಿಕವಾಗಿರುವುದರಿಂದ ಗಡಿ ಭಾಗದ ಹಲಸಂಗಿಯನ್ನು ಆಯ್ಕೆ ಮಾಡಿ ದರೋಡೆ ಮಾಡಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಹೇಳಿದರು.

ಗೋರಖ್‍ಪುರ ನಂಟು

ಬಂಧಿತ ಆರೋಪಿಗಳು ಹಲಸಂಗಿ ಗ್ರಾಮದಲ್ಲಿ ಬಂಗಾರ ಅಂಗಡಿ ದೋಚುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಆರೋಪಿಗಳು ಉತ್ತರ ಪ್ರದೇಶದ ಗೋರಖಪುರ್‍ದಿಂದ ಪಿಸ್ತೂಲ್ ತಂದಿರುವ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಎಸ್ಪಿ ನಿಂಬರಗಿ ತಿಳಿಸಿದರು.
ಈಗಾಗಲೇ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಕಂಟ್ರಿ ಪಿಸ್ತೂಲ್ ಜೊತೆಗೆ ಉಳಿದ ಮೂರು ಕಂಟ್ರಿ ಪಿಸ್ತೂಲ್‍ಗಳನ್ನು ಸಹ ಜಪ್ತು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಎಎಸ್‍ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ರಚನೆ ಮಾಡಲಾದ ಡಿವೈಎಸ್‍ಪಿಗಳಾದ ಸದಾಶಿವ ಕಟ್ಟಿಮನಿ, ಸುನೀಲ ಕಾಂಬಳೆ, ಪರಶುರಾಮ ಮನಗೂಳಿ, ಸೋಮೇಶ ಗೆಜ್ಜೆ, ರಾಕೇಶ ಬಗಲಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಅವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ನಿಂಬರಗಿ ತಿಳಿಸಿದರು.

75 ಸಾವಿರ ಸಿಸಿಟಿವಿ ಅಳವಡಿಕೆಯ ಗುರಿ

ಸಿಸಿಟಿವಿ ಕ್ಯಾಮೆರಾ ಒಂದು ಸುರಕ್ಷತೆಯ ಸಾಧನ. ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟುವ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಿಂದೇಟು ಹಾಕುವುದು ಸಲ್ಲದು, ಹೀಗಾಗಿ ಸಿಸಿಟಿವಿ ಮಹತ್ವ ಬಗ್ಗೆ ಇಲಾಖೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ ಫಲವಾಗಿ 25 ಸಾವಿರ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಾಗಿವೆ. ಈಗ ಈ ಮನವರಿಕೆ ಮಾಡುವ ಕಾರ್ಯಕ್ಕೆ ಇನ್ನಷ್ಟೂ ಒತ್ತು ನೀಡಿ 75 ಸಾವಿರ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಾಗುವ ನಿಟ್ಟಿನಲ್ಲಿ ಇಲಾಖೆ ಮುಂದಾಗಲಿದೆ ಎಂದು ನಿಂಬರಗಿ ತಿಳಿಸಿದರು.
ಇನ್ನೂ ಗ್ರಾಮೀಣ ಭಾಗದಲ್ಲಿಯೂ ಸಹ ಆಯಕಟ್ಟಿನ ಸ್ಥಳ ಸೇರಿದಂತೆ ಮನೆಗಳಲ್ಲಿ ಸಿಸಿಕ್ಯಾಮೆರಾ ಅಳವಡಿಕೆ ನಿಟ್ಟಿನಲ್ಲಿ ಗ್ರಾ.ಪಂ. ಆಡಳಿತಕ್ಕೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಪ್ರಕಟಿಸಿದರು.
ಸಾರ್ವಜನಿಕರು ಸಹ ಯಾರಾದರೂ ಸಂಶಯಾಸ್ಪದವಾಗಿ ಮುಖ ಚಹರೆ ಮುಚ್ಚಿಕೊಂಡು ಹೆಲ್ಮೆಟ್, ಗ್ಲೌಸ್ ಧರಿಸಿದ ವ್ಯಕ್ತಿಗಳು ಕಂಡು ಬಂದರೆ ಇಲಾಖೆಗೆ ಮಾಹಿತಿ ನೀಡಬೇಕು ಎಂದು ನಿಂಬರಗಿ ಮನವಿ ಮಾಡಿದರು.