
ಕಲಬುರಗಿ: ಡಿ.13:2023ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ವ್ಯಾಪಕ ಮತಗಳ್ಳತನಕ್ಕೆ ಪೂರಕವಾಗಿ ಮತ ಪತ್ರಗಳನ್ನು ತಿದ್ದಿದ ಆರೋಪದ ಮೇಲೆ ಆರೋಪ ಪಟ್ಟಿಯಲ್ಲಿ ತಮ್ಮ ಹಾಗೂ ಪುತ್ರ ಹರ್ಷಾನಂದ ಗುತ್ತೇದಾರ್ ಹೆಸರು ಸೇರ್ಪಡೆ ಮಾಡಿರುವ ಎಸ್.ಐ.ಟಿ ಕ್ರಮ ರಾಜಕೀಯ ಪ್ರೇರಿತ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಹೇಳಿದರು.
ಮತ ಪತ್ರಗಳಲ್ಲಿ ಬಿ.ಆರ್.ಪಾಟೀಲ್ ಅವರ ಕಟ್ಟಾ ಅನುಯಾಯಿಗಳು ಎಂದು ಹೇಳಲಾಗುವ 6000ಕ್ಕೂ ಅಧಿಕ ವ್ಯಕ್ತಿಗಳ ಹೆಸರುಗಳನ್ನು ಡಿಲೀಟ್ ಮಾಡಿಸಿ ಅವರು ಚುನಾವಣೆಯಲ್ಲಿ ಮತ ಚಲಾವಣೆ ಮಾಡದಂತೆ ಷಡ್ಯಂತ್ರ ರೂಪಿಸಿದ ಆರೋಪ ಎದುರಿಸುತ್ತಿರುವ ಗುತ್ತೇದಾರದ್ವಯರು, ಈ ಕೃತ್ಯಕ್ಕೆ ಹಣಕಾಸಿನ ನೆರವು ಸಹ ನೀಡಿದ್ದಾರೆ ಎಂಬ ಎಸ್‌ಐಟಿ ತಬಿಖೆಯ ಅಂಶವನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಮತ ಪತ್ರಗಳ ತಿರುಚುವಿಕೆ ಪ್ರಕಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಕಾಲ್ ಸೆಂಟರ್ ನಡೆಸುತ್ತಿರುವ ಅಕ್ರಂಪಾಶಾ ಎಂಬ ವ್ಯಕ್ತಿಗೆ ಈ ಅಕ್ರಮ ದಂಧೆಯ ಗುತ್ತಿಗೆ ನೀಡಿದ್ದು, ಪ್ರತಿ ಮತ ಪತ್ರದಲ್ಲಿ (ಫಾರಂ ನಂ.7) ಹೆಸರು ಡಿಲೀಟ್ ಮಾಡಲು ಆತನಿಗೆ ರೂ.80 ನೀಡಲಾಗಿದೆ. ಈ ಕುರಿತು ಸಂಗ್ರಹಿಸಲಾದ ಮಾಹಿತಿಗೆ ಪೂರಕ ಸಾಕ್ಷ್ಯಗಳನ್ನು ಕಲೆ ಹಾಕಲು ಗುತ್ತೇದಾರ್ ನಿವಾಸದ ಮೇಲೆ ಎಸ್.ಐ.ಟಿ ಅಧಿಕಾರಿಗಳು ದಾಳಿ ನಡೆಸಿದಾಗ ಅದಾಗಲೇ ಎಲ್ಲ ದಾಖಲೆಗಳನ್ನು ಸುಟ್ಟು ಹಾಕಲಾಗಿತ್ತು ಎಂದು ಎಸ್.ಐ.ಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ 22 ಸಾವಿರಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ.
ಆದರೆ ಈ ಎಲ್ಲ ಆರೋಪಗಳನ್ನು ಸುಭಾಷ್ ಗುತ್ತೇದಾರ್ ಅಲ್ಲಗಳೆದಿದ್ದು, ಪ್ರತಿ ಬಾರಿ ಚುನಾವಣೆಗೂ ಮುನ್ನ ಇಂತಹ ಆಧಾರ ರಹಿತ ಆರೋಪಗಳನ್ನು ಮಾಡುವುದು ಹಾಲಿ ಶಾಸಕ ಬಿ.ಆರ್. ಪಾಟೀಲರಿಗೆ ರೂಢಿಯಾಗಿದೆ. ಅದರಲ್ಲೂ ಮುಖ್ಯವಾಗಿ ಡಿ.15ರಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಮತಗಳ್ಳತನ ವಿರುದ್ಧದ ಬೃಹತ್ ಹೋರಾಟದಲ್ಲಿ ರಾಹುಲ್ ಗಾಂಧಿ ಗಮನ ಸೆಳೆದು, ಕರ್ನಾಟಕದ ಸರ್ಕಾರದಲ್ಲಿ ಮಂತ್ರಿಗಿರಿ ಪಡೆಯಬೇಕೆಂಬ ಲೆಕ್ಕಾಚಾರದಿಂದ ಹೀಗೆ ತಳಬುಡವಿಲ್ಲದ ಆರೋಪ ಮಾಡಿದ್ದಾರೆ. ಇಂತಹ ಆರೋಪಗಳಿಂದ ಏನೂ ಆಗುವುದಿಲ್ಲ ಎಂದರು.
ಸುಳ್ಳು ಆರೋಪ: ಕೋರ್ಟಿಗೆ ಮೊರೆ
ನನ್ನ ಮಗ ಹಾಗೂ ನನ್ನ ವಿರುದ್ಧ ಶಾಸಕ ಬಿ.ಆರ್.ಪಾಟೀಲ್ ಮಾಡಿರುವ ಆರೋಪ ಘನಘೋರ ಸುಳ್ಳಾಗಿದ್ದು, ಈ ಆಧಾರರಹಿತ ಆರೋಪದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಹೇಳಿದರು.
ಇಂತಹ ಸುಳ್ಳು ಆರೋಪಗಳ ಮೂಲಕ ನಮ್ಮ ಸಾಮಾಜಿಕ ವರ್ಚಸ್ಸು ಕಡಿಮೆ ಮಾಡಲು ಯತ್ನಿಸುತ್ತಿರುವ ಪಾಟೀಲ್ ಅವರಿಗೆ ಕೋರ್ಟ್ ಮೂಲಕವೇ ಉತ್ತರ ನೀಡಲಾಗುವುದು ಎಂದರು.

























