
ಯಾದಗಿರಿ, ಏ. ೧:ಸಮಾಜದಲ್ಲಿ ಸರಳ ವಿವಾಹ ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಖಿಲ ಕರ್ನಾಟಕ ಡಾ. ಜಿ. ಪರಮೇಶ್ವರ ಯುವ ಸೈನ್ಯ, ಶಹಾಪೂರ ತಾಲೂಕು ಘಟಕವು ಮೇ ೧೮ರಂದು ಶಹಾಪೂರ ನಗರದಲ್ಲಿ ಭವ್ಯ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಆರಬೋಳ, ಆರಬೋಳ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಈ ಮಹತ್ವದ ಕಾರ್ಯಕ್ರಮಕ್ಕೆ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಸೇರಿದಂತೆ ಅನೇಕ ಗಣ್ಯರು, ಮಠಾಧೀಶರು ಮತ್ತು ಸಮಾಜದ ಹಿರಿಯರು ಆಗಮಿಸಲಿದ್ದಾರೆ ಎಂದು ಹೇಳಿದರು.
ಸಮಾಜದಲ್ಲಿ ಅನಗತ್ಯ ವೈಭವ ಹಾಗೂ ಖರ್ಚುಗಳನ್ನು ಕಡಿಮೆ ಮಾಡಿ, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ಜೋಡಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು.
ವಿವಾಹವಾಗಲು ಇಚ್ಛಿಸುವ ಯುವ ಜೋಡಿಗಳು ಅಗತ್ಯ ದಾಖಲೆಗಳೊಂದಿಗೆ ಶೀಘ್ರದಲ್ಲೇ ಹೆಸರು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಲಾಗಿದ್ದು, ಸೀಮಿತ ಸ್ಥಾನಗಳಿರುವುದರಿಂದ ತಕ್ಷಣ ಸಂಪರ್ಕಿಸುವುದು ಒಳಿತು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ೯೮೮೦೩೭೩೫೬೮, ೯೯೦೨೯೫೬೩೨೦, ೭೦೨೨೦೯೦೯೯೨, ೭೬೭೬೨೮೬೪೨೭, ೬೩೬೦೪೮೧೪೫೫ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ರಮೇಶಕುಮಾರ ಕೊಳ್ಳೂರು, ಬಿ.ಎಂ. ದೊಡ್ಡಮನಿ, ಸೈದಪ್ಪ ಕಣಜಿಕರ್, ಮೌನೇಶ ಬೀರನೂರ, ವಿಶ್ವ ಛಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.























