Home Lead News ಹಿಂದಿಗೆ ಗ್ರೇಡ್ ಗೌರ್ನರ್ ಅಸಮಾಧಾನ

ಹಿಂದಿಗೆ ಗ್ರೇಡ್ ಗೌರ್ನರ್ ಅಸಮಾಧಾನ

ಬೆಂಗಳೂರು, ಏ. ೩- ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ತೀವ್ರ ಅತೃಪ್ತಿ ಅಸಮಾಧಾನ ಹೊರಹಾಕಿದ್ದು ಈ ಸಂಬಂಧ ನಿರ್ಧಾರ ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ತೃತೀಯ ಭಾಷೆ ಕಡ್ಡಾಯವಲ್ಲ ನಿಯಮ ಜಾರಿ ವಿಚಾರದಲ್ಲಿ ರಾಜ್ಯಪಾಲರು ರಂಗಪ್ರವೇಶ ಮಾಡಿರುವುದು ಗೌರ್‍ನರ್ ಮತ್ತು ಸರ್ಕಾರದ ಮಧ್ಯೆ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರು ಪತ್ರ ಬರೆದಿದ್ದು ಸರ್ಕಾರದ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ತಿಳಿಸಿದ್ದಾರೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳನ್ನು ನೀಡದೆ ಕೇವಲ ಗ್ರೇಡ್ ನೀಡುವ ನಿರ್ಧಾರವನ್ನು ಮರು ಪರಿಶೀಲಿಸಿ. ಭಾಷಾವೈವಿಧ್ಯತೆ, ಜಾಗೃತಿ, ಬೌದ್ಧಿಕ ಬೆಳವಣಿಗೆಯನ್ನು ಬೆಳೆಸುವಲ್ಲಿ ತೃತೀಯ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಗ್ರೇಡ್ ನೀಡಿದರೆ ಶೈಕ್ಷಣಿಕ ಪ್ರಾಮುಖ್ಯತೆ ಕಡಿಮೆ ಮಾಡಬಹುದು ಎಂದು ಪತ್ರದಲ್ಲಿ ರಾಜ್ಯಪಾಲರು ಉಲ್ಲೇಖಿಸಿದ್ದಾರೆ.

ಅಲ್ಲದೆ ಸರ್ಕಾರದ ಈ ನಿರ್ಧಾರ ವಿದ್ಯಾರ್ಥಿಗಳು ಕಲಿಯುವ ಮಕ್ಕಳ ಆಸಕ್ತಿಯ ಮೇಲೆ ಪರಿಣಾಮ ಬೀರಬಹುದು. ಶಿಕ್ಷಣದ ಮೇಲೆ ಬೀರುವ ಪರಿಣಾಮ ಬಗ್ಗೆ ಪೋಷಕರಿಗೂ ಆತಂಕವಿದೆ ಹೀಗಾಗಿ ಶೈಕ್ಷಣಿಕ, ಆಡಳಿತಾತ್ಮಕ ಅಂಶ ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಶೈಕ್ಷಣಿಕ ಉದ್ದೇಶಗಳಿಗೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪತ್ರದಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಬರೆದಿರುವ ಪತ್ರದಲ್ಲಿ ಈ ವಿಷಯ ತಿಳಿಸಲಾಗಿದೆ.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಅಂಕ ಪಟ್ಟಿಯಿಂದ ಹೊರಗಿಡುವಂತೆ ವಿವಿಧ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು.


ಇದರ ಬೆನ್ನಲ್ಲೇ ಎಸ್‌ಎಸ್‌ಎಲ್ಸಿ ಪರೀಕ್ಷೆಗೆ ೫೨೫ ಅಂಕಗಳು ನಿಗದಿ ಮಾಡಿ, ತೃತೀಯ ಭಾಷೆಯ ಅಂಕಕ್ಕೆ ಸರ್ಕಾರ ಕೊಕ್ ನೀಡಿತ್ತು. ಇನ್ನು ಮುಂದೆ ತೃತೀಯ ಭಾಷೆಗಳಾದ ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ ಅಂಕಗಳನ್ನು ಒಟ್ಟು ಅಂಕಗಳಿಗೆ ಪರಿಗಣಿಸಲಾಗುವುದಿಲ್ಲ. ಬದಲಿಗೆ ತೃತೀಯ ಭಾಷೆ ಪರೀಕ್ಷೆಯ ಅಂಕವನ್ನು ಗ್ರೇಡ್ ಮೂಲಕ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿತ್ತು


ವಿದ್ಯಾರ್ಥಿಗಳು ತೃತೀಯ ಭಾಷೆಯ ಪರೀಕ್ಷೆಯನ್ನು ಬರೆಯುವುದು ಕಡ್ಡಾಯ ಎಂದು ಶಿಕ್ಷಣ ಇಲಾಖೆ ಹೇಳಿರುವುದು ಭಾರಿ ಚರ್ಚೆಗೂ ಗ್ರಾಸವಾಗಿತ್ತು. ಕರ್ನಾಟಕ ಹೈಕೋರ್ಟ್ ನಲ್ಲಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿರುವ ನಡುವೆ ರಾಜ್ಯಪಾಲರ ಬರೆದಿರುವ ಈ ಪತ್ರ ಪ್ರಾಮುಖ್ಯತೆ ಪಡೆದಿದೆ.


ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂರನೇ ಭಾಷೆಗೆ ಅಂಕಗಳಿಗೆ ಬದಲಾಗಿ ಕೇವಲ ಗ್ರೇಡ್‌ಗಳನ್ನು ನೀಡುವ ನಿರ್ಧಾರ ಮರುಪರಿಶೀಲಿಸಿಬೇಕು ಈ ಕುರಿತು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘವು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.