ಬಸ್ ಹತ್ತುವಾಗ 4.50 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಕಲಬುರಗಿ,ಫೆ.9-ಮಹಿಳೆಯೊಬ್ಬರು ಬಸ್ ಹತ್ತುವಾಗ ಅವರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 4.50 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ನಡೆದಿದೆ.
ಶಹಾಬಾದ ತಾಲ್ಲೂಕಿನ ಭಂಕೂರ ಗ್ರಾಮದ ಸಂಗೀತಾ ಪ್ರಕಾಶ ಗೌರ ಎಂಬುವವರೆ ಚಿನ್ನಾಭರಣ ಕಳೆದುಕೊಂಡಿದ್ದು, ಅವರು ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಸಿದ್ದಾರೆ.
ಸಂಗೀತಾ ಅವರು ಕಲಬುರಗಿಯಲ್ಲಿ ಸಂಬಂಧಿಕರೊಬ್ಬರ ಧಾರ್ಮಿಕ ಕಾರ್ಯಕ್ರಮ ಇದ್ದ ಪ್ರಯುಕ್ತ ಭಂಕೂರ ಗ್ರಾಮದಿಂದ ಸಹೋದರಿಯೊಂದಿಗೆ ಕಲಬುರಗಿಗೆ ಬಂದಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಮರಳಿ ಊರಿಗೆ ಹೋಗಲು ಸಾಯಂಕಾಲ ರಾಮ ಮಂದಿರ ಹತ್ತಿರ ಬಸ್ ಹತ್ತಿದ್ದಾರೆ. ಟಿಕೆಟ್ ತೆಗೆಯಲು ವ್ಯಾನಿಟಿ ಬ್ಯಾಗ್ ನೋಡಿದಾಗ ಬ್ಯಾಗ್‍ನ ಚೈನ್ ತೆರೆದಿದ್ದು, ಅದರಲ್ಲಿದ್ದ 1.50 ಲಕ್ಷ ರೂ.ಮೌಲ್ಯದ 10 ಗ್ರಾಂ.ಬಂಗಾರದ ಸರ, 3 ಲಕ್ಷ ರೂ.ಮೌಲ್ಯದ 20 ಗ್ರಾಂ.ಬಂಗಾರದ ಎರಡೆಳೆ ಸರ ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.