
ಮಂಗಳೂರು,ಫೆ.೨೨- ಅಣ್ಣ ತಂಗಿಯೊಂದಿಗೆ ಮನೆಯಲ್ಲಿ ಆಟದಲ್ಲಿ ತೊಡಗಿದ್ದ ೮ ವರ್ಷದ ಬಾಲಕಿ ಶಂಕು ಆಕಾರದ ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯ ಬಳಿ ನಿನ್ನೆ ಮಧ್ಯಾಹ್ನ ನಡೆದಿದೆ.
ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಎರಡನೇ ಪುತ್ರಿ ತನುಷ್ಕ (೮) ಮೃತ ಬಾಲಕಿಯಾಗಿದ್ದಾಳೆ.
ಮೃತ ತನುಷ್ಕ ಅವರ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಉದ್ಯೋಗಕ್ಕೆ ತೆರಳಲು ಹತ್ತಿರವಾಗಲು ಕುಟುಂಬ ಸಮೇತ ಕೊಲ್ಯದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು.
ನಿನ್ನೆ ಮಧ್ಯಾಹ್ನ ಶಾಲೆಗೆ ರಜೆ ಇದ್ದ ಕಾರಣ ರಾಜೇಶ್ವರಿ ಅವರ ಎರಡನೇ ಮಗಳು ತನುಷ್ಕ ತನ್ನ ಅಣ್ಣ ಮತ್ತು ತಂಗಿಯ ಜತೆ ಲೂಡೊ ಆಟದಲ್ಲಿ ತೊಡಗಿದ್ದಳಂತೆ. ಈ ವೇಳೆ ಲೂಡೊ ಆಟದ ಪ್ಲಾಸ್ಟಿಕ್ ಕಾಯ್ನ್? ನುಂಗಿ ಏಕಾಏಕಿ ಉಸಿರುಗಟ್ಟಿ ಪರಿಸ್ಥಿತಿ ಗಂಭೀರವಾಗಿತ್ತು.
ತಕ್ಷಣವೇ ನೆರೆಹೊರೆಯವರ ಸಹಾಯದಿಂದ ಬಾಲಕಿಯನ್ನು ಅವರ ತಾಯಿಯು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಗೆಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ತನುಷ್ಕ ಮೃತ ಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಬಾಲಕಿಯ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಶಂಕಾಕೃತಿ ಆಟಿಕೆ ಲಭಿಸಿದೆ. ತೊಕ್ಕೊಟ್ಟುವಿನ ಸಂತ ಸೆಬೆಸ್ಟಿಯನ್ ಹೈಸ್ಕೂಲ್??ನಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತನುಷ್ಕ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಳು. ಬಾಲಕಿಯ ಸಾವಿನಿಂದ ಪೋಷಕರು ಸೇರಿದಂತೆ ಇಡೀ ಕುಟುಂಬವೇ ಆಘಾತಕ್ಕೊಳಗಾಗಿದೆ.





























