
ಜಮಖಂಡಿ :ಮಾ.27:ಇತಿಹಾಸದ ಪುಟಗಳಲ್ಲಿ ಪ್ರಮುಖ ಸ್ಥಾನ ಪಡೆಯಬೇಕಿದ್ದ ಜಮಖಂಡಿಯ ಸ್ವಾತಂತ್ರ್ಯ ಸೇನಾನಿ ಪದ್ಮಾವತಿ ಬಾಯಿ ಅವರು ಗೌರವದಿಂದ ವಂಚಿತರಾಗಿದ್ದಾರೆ ಎಂದು ಹಿರಿಯ ನ್ಯಾಯವಾದಿ ತಾತಾ ಸಾಹೇಬ್ ಬಾಂಗಿ ಅಭಿಪ್ರಾಯಪಟ್ಟರು.
ನಗರದ ದಾನಾಮ್ಮಾ ದೇವಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ವಿಶೇಷವಾಗಿ ಜಮಖಂಡಿಯವರಾದ ಪದ್ಮಾವತಿ ಬಾಯಿ ದೇಸಾಯಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಮೌನಕ್ರಾಂತಿ ನಡೆಸಿ, ಜೀವನಪೂರ್ತಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಜಮಖಂಡಿ ಸಂಸ್ಥಾನದ ಸಭೆಯ ಸದಸ್ಯೆಯಾಗಿದ್ದು, ಸಾಮಾಜಿಕ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದ ಏಕೈಕ ಮಹಿಳಾ ಶಾಸಕಿ ಎಂಬುದು ಗಮನಾರ್ಹ ಸಂಗತಿ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡಿ, ಈ ಮಹಾನ್ ಸೇನಾನಿಯ ಸಾಧನೆಗಳನ್ನು ಜನತೆಗೆ ಪರಿಚಯಿಸುವ ಕಾರ್ಯವನ್ನು ಡಾ. ತಾತಾ ಸಾಹೇಬ್ ಬಾಂಗಿ ಅವರು ಮಾಡಿದ್ದಾರೆ. “ಸ್ವಾತಂತ್ರ್ಯ ಸೇನಾನಿ ಪದ್ಮಾವತಿ ಬಾಯಿ ವಾಮನಾರಾಯ ದೇಸಾಯಿ (ಬಿದರಿ)” ಎಂಬ ಸಂಶೋಧನಾ ಕೃತಿಯನ್ನು ಪ್ರಕಟಿಸುವ ಮೂಲಕ ಅವರ ಹೋರಾಟದ ಬದುಕಿನ ಮೇಲೆ ಬೆಳಕು ಚೆಲ್ಲಲಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಮಾರ್ಚ್ 29 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಸವ ಭವನದಲ್ಲಿ ಕೃತಿ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಮಖಂಡಿಯ ಮೂಲ ಸಿದ್ದೇಶ್ವರ ಸಿದ್ಧಕ್ಷೇತ್ರದ ಪೂಜ್ಯ ಶ್ರೀ ಸಿದ್ದಮುತ್ಯಾ ದಿವ್ಯಸಾನಿಧ್ಯ ವಹಿಸಲಿದ್ದು, ಉದ್ಘಾಟಕರಾಗಿ ಮನೋಜ ಪಾಟೀಲ (ಪದ್ಮಾವತಿ ಬಾಯಿ ಅವರ ಮೊಮ್ಮಗ) ಭಾಗವಹಿಸಲಿದ್ದಾರೆ. ಕೃತಿ ಲೋಕಾರ್ಪಣೆಯನ್ನು ಪೆÇ್ರ. ಮೀನಾ ಚಂದಾವರಕರ (ವಿಶ್ರಾಂತ ಕುಲಪತಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ) ನೆರವೇರಿಸಲಿದ್ದಾರೆ. ಡಾ. ವಾಯ್.ಎಂ. ಯಾಕೊಳ್ಳಿ ಕೃತಿ ಪರಿಚಯ ಮಾಡಿಕೊಡಲಿದ್ದು, ನಾಡಿನ ಹಲವಾರು ಸಾಹಿತಿಗಳು ಮತ್ತು ಹೋರಾಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಪದ್ಮಾವತಿ ಬಾಯಿ ಅಭಿಮಾನಿ ಬಳಗದ ಅಧ್ಯಕ್ಷ ಕ್ಯಾಪ್ಟನ್ ಗಿರಮಲ್ಲಪ್ಪ ಹಂಚಿನಾಳ, ಬಸವರಾಜ ನಾಗಮೊತಿ, ಶ್ರೀಪಾದ ಹೊನವಾಡ, ಶಿವಾನಂದ ಸಾತ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





















