ನಾಲ್ವರು ಭ್ರಷ್ಟರು ಲೋಕಾ ಬಲೆಗೆ,ಅಕ್ರಮ ಆಸ್ತಿ ಪತ್ತೆ

ಬೆಂಗಳೂರು,ಫೆ.೧೨-ಬೆಂಗಳೂರು, ಶಿವಮೊಗ್ಗ, ಧಾರವಾಡ ಮತ್ತು ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ನಾಲ್ವರು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಹಚ್ಚಿದ್ದಾರೆ.


ಬೆಂಗಳೂರು ಗ್ರಾಮಾಂತರದ ಕರ್ನಾಟಕ ರೆಸಿಡೆನ್ಸಿಯಲ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ ಸೊಸೈಟಿ ಸೂಪರಟೆಂಡೆಂಟ್ ಇಂಜಿನಿಯರ್ ಹೆಚ್ ಎಂ ಜನಾರ್ದನ್,ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಪುರುಷೋತ್ತಮ ದಾಸ್ ಹೆಗಡೆ,ದಾವಣಗೆರೆಯ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರ್ಜುನ ಆರ್.ಹೆಚ್ ಹಾಗೂ ಧಾರವಾಡದ ಭೂದಾಖಲೆಗಳ ಸರ್ವೇಯರ್ ಸೋಮಲಿಂಗಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.


ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಪುರುಷೋತ್ತಮ ದಾಸ್ ಕಚೇರಿ ಮನೆ ಸೇರಿ ೧೧ ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೆಚ್ ಎಂ ಜನಾರ್ದನ್ ಅವರ ಕಚೇರಿ ಮನೆ ಮೇಲೆ ಬೆಳಿಗ್ಗೆಯಿಂದ ದಾಳಿ ನಡೆಸಿ ಅಕ್ರಮ ಆಸ್ತಿ ಪಾಸ್ತಿ ಪತ್ತೆಹಚ್ಚಿದ್ದಾರೆ.


ಮೈಸೂರಿನಲ್ಲಿ ೫ ಕಡೆ, ಬೆಂಗಳೂರಿನಲ್ಲಿ ೬ ಕಡೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳಿಗಾಗಿ ಶೋಧ ನಡೆಸಿದ್ದಾರೆ.


ಬೆಸ್ಕಾಂ ಇಂಜಿನಿಯರ್ ಆರ್.ಹೆಚ್ ಅರ್ಜುನ್ ಅವರ ಮನೆ ಹಾಗೂ ಕಚೇರಿ ಮೇಲೂ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.


ದಾವಣಗೆರೆಯ ಬೆಸ್ಕಾಂನ ಸಿವಿಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಜುನ್ ವಿರುದ್ಧ ಆದಾಯ ಮೀರಿ ಅಪಾರ ಪ್ರಮಾಣದ ಆಸ್ತಿ ಗಳಿಸಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತ್ರತ್ವದ ತಂಡ ದಾಳಿ ನಡೆಸಿದೆ.


ಅರ್ಜುನ್ ವಾಸವಿದ್ದ ದಾವಣಗೆರೆ ನಗರದ ನಿಟ್ಟುವಳ್ಳಿನಲ್ಲಿ ರೂಮ್, ಕಚೇರಿ ಹಾಗೂ ಶಿವಮೊಗ್ಗದ ಮನೆಯ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಮನೆಯಲ್ಲಿ ಆಸ್ತಿ ಪತ್ರ ಹಾಗೂ ಚಿನ್ನ ಬೆಳ್ಳಿ ಪತ್ತೆಯಾಗಿದ್ದು, ಇನ್ನಷ್ಟು ಮಹತ್ವದ ದಾಖಲೆಗಳನ್ನ ಪತ್ತೆಹಚ್ಚಲು ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.


ಶಿವಮೊಗ್ಗದ ವಿಜಯನಗರ ಹಾಗೂ ಗೋಪಾಲಗೌಡ ಬಡಾವಣೆಯಲ್ಲಿರುವ ಅವರ ನಿವಾಸಗಳ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದೆ.


ಸಾಗರ ಆನಂದಪುರ ಸಮೀಪದ ತಳಲೆ ಗ್ರಾಮದಲ್ಲಿರುವ ಅರ್ಜುನ ಅವರಿಗೆ ಸೇರಿದ ೨.೫ ಎಕರೆ ಮತ್ತು ೪.೫ ಎಕರೆ ವಿಸ್ತೀರ್ಣದ ಬೃಹತ್ ಫಾರ್ಮ್ ಹೌಸ್‌ಗಳ ಮೇಲೂ ಅಧಿಕಾರಿಗಳು ದಾಳಿ ಇಟ್ಟಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್, ಇನ್ಸೆಕ್ಟರ್‌ಗಳಾದ ಪ್ರಭು ಸೊರೇನ್ ಮತ್ತು ಗುರುರಾಜ್ ಮೈಲಾರಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.


ಸರ್ವೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೋಮಲಿಂಗಪ್ಪ ಸಿದ್ದನಗೌಡರ್ ಅವರ ನಿವಾಸಗಳ ಮೇಲೆ ದಾಳಿ ನಡೆದಿದೆ.

ಧಾರವಾಡದ ಮುರಗೋಡ್ ನಿವಾಸ, ಭಾರತಿ ನಗರದ ನಿವಾಸ ಹಾಗೂ ಎಡಿಎಲ್‌ಆರ್ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಆಸ್ತಿ ವಿವರಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

ಬಲೆಗೆ ಬಿದ್ದವರು


*ಹೆಚ್ ಎಂ ಜನಾರ್ದನ್ ಸೂಪರಟೆಂಡೆಂಟ್ ಇಂಜಿನಿಯರ್ ಕೆಆರ್ ಇಐಎಸ್ ಬೆಂಗಳೂರು ಗ್ರಾಮಾಂತರ
*ಪುರುಷೋತ್ತಮ ದಾಸ್ ಹೆಗಡೆ ಮುಖ್ಯ ಇಂಜಿನಿಯರ್ ಲೋಕೋಪಯೋಗಿ ಬೆಂಗಳೂರು
*ಅರ್ಜುನ ಆರ್.ಹೆಚ್ ಎಇಇ ಬೆಸ್ಕಾಂ ದಾವಣಗೆರೆ
*ಸೋಮಲಿಂಗಪ್ಪ ಸರ್ವೇಯರ್ ಧಾರವಾಡ