
ಬೀದರ, ಮಾ ೯: ನಮ್ಮ ನೆಲಮೂಲದ ಸಂಸ್ಕೃತಿ ಹಾಗೂ ಪರಂಪರೆಯನ್ನು ಎಲ್ಲರಿಗೂ ತಿಳಿಸುವುದೇ ಜನಪದದ ಮುಖ್ಯ ಉದ್ದೇಶ ಎಂದು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಬೀದರ ತಾಲ್ಲೂಕು ಘಟಕ ಮತ್ತು ಅನುರಾಗ ಸಾವಂತ ಪಬ್ಲಿಕ್ ಶಾಲೆ, ನೌಬಾದ್ ಇವರ ಸಂಯುಕ್ತಾಶ್ರಯದಲ್ಲಿ “ಶಾಲಾ-ಕಾಲೇಜಿಗೊಂದು ಜಾನಪದ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಾಜಕುಮಾರ ಹೆಬ್ಬಾಳೆ, ಜಾನಪದ ಪರಿಷತ್ತಿನಂತಹ ಸಂಸ್ಥೆಗಳು ಸಮಾಜಕ್ಕೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮಕ್ಕಳಿಂದ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಶಾಲಾ ಶಿಕ್ಷಕಿ ಶ್ರೀಮತಿ ಅಂಬಿಕಾ ಮೇಲಕೇರಿ ಸ್ವಾಗತ ಭಾಷಣ ಮಾಡಿದರು. ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಸ್.ಬಿ. ಕುಚಬಾಳ ಅವರು ಜಾನಪದ ಪರಿಷತ್ತು ನಡೆದು ಬಂದ ದಾರಿ ಹಾಗೂ ಅನುರಾಗ ಸಾವಂತ ಶಾಲೆಯ ಶಿಸ್ತುಬದ್ಧತೆಯ ಕುರಿತು ಪ್ರಾಸ್ತಾವಿಕವಾಗಿ ವಿವರಿಸಿದರು.
ಸಂಸ್ಥಾಪಕ ಅಧ್ಯಕ್ಷ ಕೆ.ಎನ್. ಸಾವಂತ ಮಾತನಾಡಿ, ಜಾನಪದ ಪರಿಷತ್ತಿನ ಕಾರ್ಯಕ್ರಮವನ್ನು ತಮ್ಮ ಶಾಲೆಯಲ್ಲಿ ಆಯೋಜಿಸಿರುವುದು ಶ್ಲಾಘನೀಯ ಸಂಗತಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ೮ನೇ ತರಗತಿ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಬೀಳ್ಕೊಡಲಾಯಿತು. ರಾಷ್ಟ್ರ ಮಟ್ಟದ ಅತ್ಯುತ್ತಮ ಶಾಲಾ ಪ್ರಶಸ್ತಿ ಪಡೆದಿರುವ ಹಿನ್ನೆಲೆಯಲ್ಲಿ ಕೆ.ಎನ್. ಸಾವಂತ ಅವರನ್ನು ಪರಿಷತ್ತಿನ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಜಾನಪದ ನೃತ್ಯ ಪ್ರದರ್ಶನವೂ ನಡೆಯಿತು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಸವರಾಜ ಹೆಗ್ಗೆ ನಿರೂಪಣೆ ಮಾಡಿದರು. ಶಾಲಾ ಪ್ರಾಚಾರ್ಯರಾದ ರಾಣಿ ಎ. ಮೊಗಲೆ, ಆಡಳಿತಾಧಿಕಾರಿ ವಿಜಯಕುಮಾರ ಸಿಂಗ್ ಹಾಗೂ ಪವನ ನಾಟೇಕರ್ ಉಪಸ್ಥಿತರಿದ್ದರು. ಧನರಾಜ ಅನೆಕಲೆ ಅವರ ವಂದನೆಗಳೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


























