
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟೆಚ್ಚರ, ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ
ಬೆಂಗಳೂರು, ಫೆ. ೨೮- ವಿದ್ಯಾರ್ಥಿ ಜೀವನದ ಪ್ರಮುಖ ಕಾಲಘಟ್ಟವೆಂದೇ ಹೇಳಲಾಗುವ ದ್ವಿತೀಯ ಪಿಯುಸಿ ಪರೀಕ್ಷೆಗಳು ರಾಜ್ಯಾದ್ಯಂತ ಇಂದಿನಿಂದ ಆರಂಭವಾಗಿದ್ದು, ಮೊದಲ ದಿನ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ.
ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಸುಮಾರು ೭ ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಪರೀಕ್ಷೆಯ ಮೊದಲ ದಿನವಾದ ಇಂದು ಕನ್ನಡ ಮತ್ತು ಅರೆಬಿಕ್ ವಿಷಯಗಳ ಪರೀಕ್ಷೆ ನಡೆಯಿತು.
ಇಂದಿನಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ ೧೭ರ ವರೆಗೂ ನಡೆಯಲಿದ್ದು, ಪರೀಕ್ಷೆಗಾಗಿ ರಾಜ್ಯಾದ್ಯಂತ ೧೨೧೭ ಕೇಂದ್ರಗಳನ್ನು ಆರಂಭಿಸಲಾಗಿದೆ.
ಮುಖ್ಯಮಂತ್ರಿ ಶುಭ ಸಂದೇಶ
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಹಾರೈಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಉತ್ತಮ ಅಂಕಗಳ ಜತೆಗೆ ಉಜ್ವಲ ಭವಿಷ್ಯವು ನಿಮ್ಮದಾಗಲಿ ಎಂದು ಹಾರೈಸಿದ್ದಾರೆ.
ಪರೀಕ್ಷೆ ಕಟ್ಟೆಚ್ಚರ
ದ್ವಿತೀಯ ಪಿಯುಸಿ ಪರೀಕ್ಷೆಗೆ ಪ.ಪೂ. ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಯಾವುದೇ ಅಕ್ರಮಗಳಿಗೆ ಅವಕಾಶ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಪರೀಕ್ಷಾ ಕೇಂದ್ರದ ಸುತ್ತ ಸುಮಾರು ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಕಂಪ್ಯೂಟರ್ ಶಾಪ್‌ಗಳನ್ನು ಬಂದ್ ಮಾಡಲಾಗಿದೆ.
ಪರೀಕ್ಷೆ ನಡೆಯುವ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇಡೀ ಪರೀಕ್ಷಾ ವ್ಯವಸ್ಥೆಯನ್ನು ಮಾನಿಟರ್ ಮಾಡಲು ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ವೆಬ್‌ಕಾಸ್ಟಿಂಗ್ ವ್ಯವಸ್ಥೆಯ ಉಸ್ತುವಾರಿ ನೋಡಿಕೊಂಡಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ಅಧಿಕಾರಿಗಳು ಮೊಬೈಲ್ ಫೋನ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ವಾಚ್ ಸೇರಿ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಗೂ ನಿಷೇಧ ಹೇರಲಾಗಿದೆ.
ಪ್ರತಿ ಕೇಂದ್ರದಲ್ಲೂ ಸಿಟ್ಟಿಂಗ್ ಸ್ಕ್ವಾಡ್, ಫ್ಲೈಯಿಂಗ್ ಸ್ಕ್ವಾಡ್ ಜತೆಗೆ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸುಳ್ಳು ಸುದ್ದಿ ಹರಡುವವರ ಬಗ್ಗೆಯೂ ಪೊಲೀಸ್ ಇಲಾಖೆ ನಿಗಾ ಇಟ್ಟಿದೆ.
ಪರೀಕ್ಷಾ ವೇಳಾಪಟ್ಟಿ
ಇಂದು ಕನ್ನಡ ಅರೆಬಿಕ್ ಪರೀಕ್ಷೆ ನಡೆದಿದ್ದರೆ, ಮಾರ್ಚ್ ೨ ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ ಪರೀಕ್ಷೆ, ಮಾ. ೩ ರಂದು ಇಂಗ್ಲೀಷ್ ಪರೀಕ್ಷೆ, ಮಾ. ೪ ರಂದು ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಪರೀಕ್ಷೆ, ಮಾ. ೫ ರಂದು ಇತಿಹಾಸ ವಿಷಯದ ಪರೀಕ್ಷೆ, ಮಾ. ೬ ರಂದು ಭೌತಶಾಸ್ತ್ರ ವಿಷಯದ ಪರೀಕ್ಷೆ, ಮಾ. ೭ ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ ವಿಷಯಗಳ ಪರೀಕ್ಷೆ, ಮಾ. ೯ ರಂದು ರಾಸಾಯನಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲಗಣಿತ ವಿಷಯಗಳ ಪರೀಕ್ಷೆ, ಮಾ. ೧೦ ರಂದು ಅರ್ಥಶಾಸ್ತ್ರ ವಿಷಯ ಪರೀಕ್ಷೆ, ಮಾ. ೧೧ ರಂದು ತರ್ಕ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹ ವಿಜ್ಞಾನ ವಿಷಯಗಳ ಪರೀಕ್ಷೆ, ಮಾ. ೧೨ ಹಿಂದಿ ಪರೀಕ್ಷೆ, ಮಾ. ೧೩ ರಾಜ್ಯಶಾಸ್ತ್ರ ವಿಷಯದ ಪರೀಕ್ಷೆ, ಮಾ. ೧೪ ಗಣಿತ, ಲೆಕ್ಕಶಾಸ್ತ್ರ ವಿಷಯಗಳ ಪರೀಕ್ಷೆ, ಮಾ. ೧೬ ಸಮಾಜ ಶಾಸ್ತ್ರ, ಜೀವಶಾಸ್ತ್ರ, ಗಣಕವಿಜ್ಞಾನ ವಿಷಯಗಳ ಪರೀಕ್ಷೆ, ಮಾ. ೧೭ ರಂದು ಹಿಂದುಸ್ತಾನಿ ಸಂಗೀತ, ರೀಟೈಲ್ ಆಟೋ ಮೊಬೈಲ್, ಆರೋಗ್ಯ ರಕ್ಷಣೆ ವಿಷಯಗಳ ಪರೀಕ್ಷೆ ನಡೆಯಲಿದೆ.
ಈ ಎಲ್ಲಾ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಅಗತ್ಯ ಇರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಲ್ಲಿ ಇಡಲಾಗಿದ್ದು, ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆಗಳು ರವಾನೆಯಾಗಲಿದೆ. ಪ್ರಶ್ನೆ ಪತ್ರಿಕೆ ರವಾನೆ ವ್ಯವಸ್ಥೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಯಾವುದೇ ಅಕ್ರಮಕ್ಕೆ ಅವಕಾಶ ಇಲ್ಲದಂತೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಆಲ್ ಟಿಕೆಟ್ ತೋರಿಸಿ ಉಚಿತ ಪ್ರಯಾಣಕ್ಕೂ ಅವಕಾಶ ಕಲ್ಪಿಸಲಾಗಿದೆ.
ಯಾದಗಿರಿಯಲ್ಲಿ ಗೊಂದಲ
ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ ಯಾದಗಿರಿಯಲ್ಲಿ ಪಿಯು ಮಂಡಳಿ ಹಾಗೂ ಕಾಲೇಜಿನ ಎಡವಟ್ಟಿನಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾದರು.
ಪರೀಕ್ಷಾ ಕೇಂದ್ರ ಇರುವುದು ಒಂದು ಕಡೆಯಾದರೂ ಪರೀಕ್ಷಾ ನೋಂದಣಿ ಪತ್ರದಲ್ಲಿ ನಮೂದಿಸಿರುವ ವಿಳಾಸವೇ ಬೇರೆಯಾದ ಕಾರಣ ಯಾದಗಿರಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಹುಡಕಲು ಪರದಾಡಿದರು.
ಯಾದಗಿರಿ ನಗರ ಪ್ರಭಾ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಕಾಲೇಜು ಇರುವುದು ರುಂಬಿನಿ ಪಾರ್ಕ್ ಹತ್ತಿರವಾದರೆ ಆಲ್‌ಟಿಕೆಟ್‌ನಲ್ಲಿ ಗಂಜ್ ರೋಡ್ ಎಂದು ನಮೂದಿಸಲಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕಾಗಿ ಹುಡುಕಾಡಿ ಕೊನೆಗೆ ಸ್ಥಳೀಯರ ಸಹಾಯದಿಂದ ಪ್ರಭಾ ಪಿಯು ಕಾಲೇಜನ್ನು ನಿಗದಿತ ಸಮಯಕ್ಕೆ ತಲುಪಿ ನಿಟ್ಟುಸಿರು ಬಿಟ್ಟರು.
ಪಿಯುಸಿ ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು
ಚಿಕ್ಕೋಡಿ,ಫೆ.೨೮- ದ್ವಿತೀಯ ಪಿಯುಸಿ ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿಯು ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ಬಂಬಲವಾಡ ಗ್ರಾಮದಲ್ಲಿ ನಡೆದಿದೆ.
ಬಂಬಲವಾಡ ಗ್ರಾಮದ ಭೂಮಿಕಾ ಮಾಳಂಗಿ (೧೭) ಮೃತ ದುರ್ದೈವಿ. ಪರೀಕ್ಷೆಗೆ ಸಕಲ ತಯಾರಿ ಮಾಡಿಕೊಂಡಿದ್ದ ಭೂಮಿಕಾ ಇಂದು ಉತ್ಸಾಹದಿಂದಲೇ ಪರೀಕ್ಷೆಗೆ ಹೊರಡಲು ತಯಾರಾಗಿದ್ದರು.
ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಸ್ನಾನ ಮುಗಿಸಿ ಮನೆಯಿಂದ ಹೊರಬರುತ್ತಿದ್ದಾಗಲೇ ಹಠಾತ್ ಹೃದಯಾಘಾತ ಸಂಭವಿಸಿದೆ.
ಕೂಡಲೇ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಅಸುನೀಗಿದ್ದಾರೆ. ದುರ್ಘಟನೆಯಿಂದ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.






























